Monday, 20th August 2018

ಆಪರೇಶನ್ ಕಮಲದ ಭೀತಿಯಿಂದ ಮತ್ತೊಂದು ಹೋಟೆಲ್‍ಗೆ ಜೆಡಿಎಸ್ ಶಾಸಕರು ಶಿಫ್ಟ್!

ಚಿಕ್ಕಬಳ್ಳಾಪುರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್‍ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗೋಲ್ಡನ್ ಶೈರ್ ವಿಲ್ಲಾಸ್‍ಗೆ ಶಿಫ್ಟ್ ಆಗಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವವರೆಗೂ ಜೆಡಿಎಸ್ ಶಾಸಕರನ್ನು ಕ್ಷೇತ್ರಗಳಿಗೆ ಕಳಿಸದೇ ಶಾಸಕರು ಒಟ್ಟಾಗಿ ಇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ದೇವನಹಳ್ಳಿ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟಿಜ್ ಗಾಲ್ಫ್ ರೆಸಾರ್ಟ್‍ನಲ್ಲಿ 38 ರೂಂಗಳನ್ನ ಬುಕ್ ಮಾಡಲಾಗಿದೆ. ಈ ಹಿನ್ನಲೆ ಕಳೆದ ರಾತ್ರಿ 35 ಜೆಡಿಎಸ್ ಶಾಸಕರು ರೆಸಾರ್ಟ್‍ಗೆ ಆಗಮಿಸಿದ್ದು, ಕೆಲ ಶಾಸಕರು ತಮ್ಮ ಕುಟುಂಬಸ್ಥರ ಜೊತೆ ವಿಲ್ಲಾಗಳಲ್ಲಿ ತಂಗಿದ್ದಾರೆ.

ಇನ್ನೂ ಎರಡು ಮೂರು ದಿನಗಳ ಕಾಲ ಜೆಡಿಎಸ್ ಶಾಸಕರು ವಿಲ್ಲಾಗಳಲ್ಲೇ ಉಳಿಯಲಿದ್ದು, ಜೆಡಿಎಸ್ ಶಾಸಕರು ತಮ್ಮ ಕುಟುಂಬದ ಜೊತೆ ಕಾಲ ಕಳೆಯಲಿದ್ದಾರೆ. ವಿಶ್ವಾಸ ಮತಯಾಚನೆಗೂ ಮುನ್ನ ಆಪರೇಶನ್ ಕಮಲದ ಭೀತಿಯಿಂದ ಪಾರಾಗಲು ಕುಮಾರಸ್ವಾಮಿಯವರು ಈ ರೀತಿಯ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಇಂದು ಬೆಳಗ್ಗೆಯಿಂದಲೂ ರೆಸಾರ್ಟ್‍ಗೆ ತೆರಳುವ ಸಿಬ್ಬಂದಿಯನ್ನು ತಪಾಸಣೆ ಮಾಡುತ್ತಿರುವ ಪೊಲೀಸರು ಹಾಗೂ ವಿಲ್ಲಾಸ್ ಭದ್ರತಾ ಸಿಬ್ಬಂದಿ ಯಾರಿಗೂ ಒಳಗೆ ಪ್ರವೇಶವನ್ನು ಕಲ್ಪಿಸಿಕೊಟ್ಟಿಲ್ಲ. ಜೊತೆಗೆ ಇಂದು ಬೆಳಗ್ಗೆ 11 ಗಂಟೆ ನಂತರ ಹಾಸನದಿಂದ ಕುಮಾರಸ್ವಾಮಿಯವರು ರೆಸಾರ್ಟ್‍ಗೆ ಆಗಮಿಸುವ ನಿರೀಕ್ಷೆಯಿದ್ದು, ಶಾಸಕರ ಜೊತೆ ಉಭಯ ಕುಶಲೋಪರಿ ನಡೆಸಿ ನಂತರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ಹೆಚ್‍ಡಿಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *