Friday, 13th December 2019

ಕುಮಾರಸ್ವಾಮಿ ಮಾಡಿದ್ದು ತಪ್ಪು ನಿರ್ಧಾರ: ಸಿಎಂ ವಿರುದ್ಧ ಜಮೀರ್ ಅಹ್ಮದ್ ಆರೋಪ

ಹುಬ್ಬಳ್ಳಿ: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿಎಂ ಕುಮಾರಸ್ವಾಮಿ ಅವರು ಮಾಡಿದ ತಪ್ಪು ನಿರ್ಧಾರವೇ ಕಾರಣ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2008ರ ಮೊದಲು ರಾಜ್ಯದಲ್ಲಿ ಬಿಜೆಪಿ ಹೆಚ್ಚು ಹೆಸರು ಮಾಡಿರಲಿಲ್ಲ. ಆಗ ಕರ್ನಾಟಕದಲ್ಲಿ ಬಿಜೆಪಿಯವರಿಗೆ ಬೇಸ್ ಇರಲಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಅವರು ಮಾಡಿದ ತಪ್ಪು ನಿರ್ಧಾರವೇ ಕಾರಣವಾಯ್ತು. 2008 ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಬಿಜೆಪಿಗೆ ಕುಮಾರಸ್ವಾಮಿ ಅವರು ಅಧಿಕಾರ ಬಿಟ್ಟು ಕೊಡಬೇಕಿತ್ತು, ಆದರೆ ಅಧಿಕಾರ ಬಿಟ್ಟು ಕೊಡದ ಕಾರಣ ರಾಜ್ಯದಲ್ಲಿ ಬಿಜೆಪಿ ಬೆಳೆಯಿತು ಎಂದು ಆರೋಪಿಸಿದರು.

ಮೈತ್ರಿ ಸರ್ಕಾರದಲ್ಲಿ 5 ವರ್ಷ ಸಂಪೂರ್ಣವಾಗಿ ಕುಮಾರಸ್ವಾಮಿ ಅವರು ಸಿಎಂ ಆಗಿರುತ್ತಾರೆ. 2022ರಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ 2022 ರಲ್ಲಿ ಚುನಾವಣೆ ನಿಲ್ಲದೇ ಇದ್ದರು ನಾವು ಬಿಡುವುದಿಲ್ಲ. ಅವರನ್ನು ನಾವು ಸಿಎಂ ಮಾಡುತ್ತೇವೆ ಎಂದು ಜಮೀರ್ ತಿಳಿಸಿದರು.

ನಮ್ಮ ಜೊತೆಯೂ ಬಿಜೆಪಿಯ ಹತ್ತು ಜನ ಶಾಸಕರು ಸಂರ್ಪಕದಲ್ಲಿದ್ದಾರೆ. ಅವರ ಸಂರ್ಪಕದಲ್ಲಿ 20 ಜನ ಇದ್ದರೆ ನಮ್ಮ ಜೊತೆನೂ 10 ಜನ ಇದ್ದಾರೆ. ಅವರು ನಮ್ಮ 20 ಜನ ಶಾಸಕರ ಹೆಸರು ಬಹಿರಂಗ ಪಡಿಸಲಿ. ನಾನು ನಮ್ಮ ಜೊತೆ ಇರುವ ಬಿಜೆಪಿಯ 10 ಮಂದಿ ಶಾಸಕರ ಹೆಸರು ರೀವಿಲ್ ಮಾಡುತ್ತೇನೆ. ಬಿಜೆಪಿಯುವರು ಸುಮ್ಮನೆ ಬೊಗಳೆ ಬಿಡುತ್ತಿದ್ದಾರೆ. ಮೇ 23ಕ್ಕೆ ದೋಸ್ತಿ ಸರ್ಕಾರ ಬೀಳತ್ತೆ ಎಂದು ಬಿಜೆಪಿ ಅವರು ಹೇಳುತ್ತಿದ್ದಾರೆ. 23 ಅಲ್ಲ ಇನ್ನು ಎರಡೂ ದಿನ ಹೆಚ್ಚಿಗೆ ತೆಗದುಕೊಳ್ಳಲಿ, ಮೇ 25 ಕ್ಕೆ ನಮ್ಮ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸರ್ಕಾರ ರಚನೆ ಮಾಡದೇ ಹೋದರೆ ಬಿಜೆಪಿ ಅವರು ನಿವೃತ್ತಿ ತೆಗೆದುಕೊಳ್ತಾರಾ ಎಂದು ಪ್ರಶ್ನಿಸಿ ಕಮಲಕ್ಕೆ ಜಮೀರ್ ಅಹ್ಮದ್ ಅವರು ಸವಾಲ್ ಹಾಕಿದರು.

Leave a Reply

Your email address will not be published. Required fields are marked *