Connect with us

Districts

ಜೆಡಿಎಸ್ ತಾನೂ ಹಾಳಾಗುತ್ತೆ ಜೊತೆಗೆ ಕಾಂಗ್ರೆಸ್ಸನ್ನು ಮುಗಿಸಿ ಹೋಗುತ್ತೆ: ಜೋಶಿ ವ್ಯಂಗ್ಯ

Published

on

-ಕಾಂಗ್ರೆಸ್ ಪಕ್ಷವನ್ನ ಮುಗಿಸಲು ದೊಡ್ಡಗೌಡರಿಂದ ಭಾರೀ ಪ್ಲಾನ್

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಮುಗಿಸಲು ದೊಡ್ಡಗೌಡರು ಭಾರೀ ಪ್ಲಾನ್ ಮಾಡಿದ್ದಾರೆ. ಈ ಟ್ರಾಪ್‍ನಲ್ಲಿ ಹೋಗಿ ಕಾಂಗ್ರೆಸ್ಸಿನವರು ಬೀಳುತ್ತಿದ್ದಾರೆ ಎಂದು ಹೆಚ್‍ಡಿಡಿ ಪ್ಲಾನ್ ಬಗ್ಗೆ ಬಿಜೆಪಿ ಮುಖಂಡ, ಸಂಸದ ಪ್ರಹ್ಲಾದ್ ಜೋಶಿ ಬಿಚ್ಚಿಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸಲು ದೇವೇಗೌಡರು ಭಾರಿ ಟ್ರಾಪ್ ಮಾಡಿದ್ದಾರೆ. ದೇವೇಗೌಡರಿಗೆ ದೃತರಾಷ್ಟ್ರ ಮೋಹ ಶುರುವಾಗಿದೆ. ಅವರ ಮಕ್ಕಳು, ಮೊಮ್ಮಕ್ಕಳ ಮೋಹದಲ್ಲಿ ಕಾಂಗ್ರೆಸ್‍ನಂತಹ ಕೌರವ ಕುಲ ಹಾಳಾಗುತ್ತೆ. ಜೆಡಿಎಸ್ ತಾನೂ ಹಾಳಾಗುತ್ತೆ, ಕಾಂಗ್ರೆಸ್ಸನ್ನೂ ಹಾಳು ಮಾಡುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ಸನ್ನ ಮುಗಿಸಲು ಕೆಲ ಕೈ ನಾಯಕರೇ ರೆಡಿಯಾಗಿದ್ದಾರೆ. ಇದರಲ್ಲಿ ಕೆಲ ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಭಾಗಿಯಾಗಿದ್ದಾರೆ. ಇಷ್ಟರಲ್ಲೆ ಅವರ ಹೆಸರುಗಳು ಮಾಧ್ಯಮಗಳ ಮೂಲಕವೇ ಹೊರ ಬೀಳಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ತನ್ನಿಂದ ತಾನೇ ಆಗಲಿದೆ. ಈ ಚುನಾವಣೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲು ದೊಡ್ಡ ಮುನ್ನುಡಿಯನ್ನ ಬರೆಯಲಿದೆ ಎಂದು ವಿಜಯಪುರದ ಖಾಸಗಿ ಹೋಟೇಲ್‍ನಲ್ಲಿ ಸ್ಫೋಟಕ ವಿಚಾರವನ್ನು ಹೊರಹಾಕಿದ್ದಾರೆ.

ಧಾರವಾಡ ಕಟ್ಟಡ ದುರಂತ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಈ ಕಟ್ಟಡ ದುರಂತದಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನ ನೀಡಬೇಕು. ಕೆಲವು ಪ್ರಭಾವಿಗಳು ಹೆಚ್ಚು ದುಡ್ಡುಗಳಿಸಲು ಕಳಪೆ ಕಾಮಗಾರಿ ಮಾಡಿದ್ದಾರೆ. ಬಿಲ್ಡಿಂಗ್ ಮಾಲೀಕರ ಮೇಲೆ ವೀಕ್ ಸೆಕ್ಷನ್‍ಗಳನ್ನು ಹಾಕಿದ್ದಾರೆ. ಪರಿಹಾರ ಹಾಗೂ ಗಾಯಾಳುಗಳಿಗೆ ಚಿಕಿತ್ಸೆಗೆ ನೀಡುವುದು ವಿಳಂಬ ಆಗುತ್ತಿದೆ ಎಂದು ಜೋಶಿ ಕಿಡಿಕಾರಿದ್ದಾರೆ.