Connect with us

Latest

ಪುಲ್ವಾಮಾ ದಾಳಿ – ಭಯೋತ್ಪಾದಕಿ ಮಗಳಿಗೆ ಸಾಥ್ ಕೊಟ್ಟಿದ್ದ ತಂದೆ, ಬಯಲಾಯ್ತು ಸ್ಫೋಟಕ ಸತ್ಯ

Published

on

– ಮಾಸ್ಟರ್ ಮೈಂಡ್ ಜೊತೆ ನಿರಂತರ ಸಂಪರ್ಕ
– ಎನ್‍ಐಎ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖ

ಶ್ರೀನಗರ: ಪುಲ್ವಾಮಾ ಭಯೋತ್ಪಾದನಾ ಪ್ರಕರಣದಲ್ಲಿ ಬಂಧಿತಳಾಗಿದ್ದ ಏಕೈಕ ಮಹಿಳಾ ಭಯೋತ್ಪಾದಕಿ ಕೃತ್ಯದ ಮಾಸ್ಟರ್ ಮೈಂಡ್ ಜೊತೆ ನಿಕಟ ಸಂಪರ್ಕದಲ್ಲಿದ್ದ ವಿಚಾರ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಪುಲ್ವಾಮಾದಲ್ಲಿ ಎನ್‍ಐಎ 23 ವರ್ಷದ ಇನ್ಶಾ ಜಾನ್ ಮತ್ತು ಆಕೆಯ ತಂದೆಯನ್ನು ಬಂಧಿಸಿತ್ತು. ಈಗ ಈ ಕೃತ್ಯದಲ್ಲಿ ಆಕೆ ಹೇಗೆ ನೆರವಾಗಿದ್ದಳು ಎಂಬುದನ್ನು ವಿವರಿಸಲಾಗಿದೆ.

ಜೈಶ್-ಎ-ಮೊಹಮ್ಮದ್ ಉಗ್ರಸಂಘಟನೆಗೆ ಸೇರಿದ್ದ ಇನ್ಶಾ ಜಾನ್ ಕಳೆದ ಮಾರ್ಚ್‍ನಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಪಾಕಿಸ್ತಾನದ ಬಾಂಬ್ ತಯಾರಕ ಮತ್ತು ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಉಮರ್ ಫಾರೂಕ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಳು. ಇನ್ಶಾ ಫೋನ್ ಮತ್ತು ಇತರ ಸಾಮಾಜಿಕ ಮಾಧ್ಯಮದಲ್ಲಿ ಆತನೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಎನ್‍ಐಎ ತಿಳಿಸಿದೆ.

ಮಂಗಳವಾರ ಎನ್‍ಐಎ ಅಧಿಕಾರಿಗಳು ಪುಲ್ವಾಮಾ ದಾಳಿಯ ಬಗ್ಗೆ 13,500 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಇದಾದ ಒಂದು ದಿನದ ನಂತರ ಮಾತನಾಡಿರುವ ಹಿರಿಯ ಎನ್‍ಐಎ ಅಧಿಕಾರಿಯೊಬ್ಬರು, ಇನ್ಶಾ ಜಾನ್ ಮತ್ತು ಮೊಹಮ್ಮದ್ ಉಮರ್ ಫಾರೂಕ್ ನಡೆಸಿರುವ ಸಂಭಾಷಣೆ ಮತ್ತು ಸಂದೇಶಗಳು ನಮಗೆ ಸಿಕ್ಕಿವೆ. ಮಗಳು ಉಗ್ರರ ಜೊತೆ ಸಂಪರ್ಕದಲ್ಲಿದ್ದ ವಿಚಾರ ಇನ್ಶಾ ಜಾನ್‍ಳ ತಂದೆ ತಾರಿಕ್ ಪಿರ್ ಕೂಡ ಗೊತ್ತಿತ್ತು ಎಂದು ಹೇಳಿದ್ದಾರೆ.

ಪುಲ್ವಾಮಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಉಮರ್ ಫಾರೂಕ್ ಮತ್ತು ಅತನ ಇಬ್ಬರು ಸಹಚರರ ಸಂಚಾರ ಮಾಡಲು ತಾರಿಕ್ ಪಿರ್ ಸಹಾಯ ಮಾಡಿದ್ದ. ಜೊತೆಗೆ ತಂದೆ-ಮಗಳು ಜೋಡಿ ಪುಲ್ವಾಮಾ ದಾಳಿಯಲ್ಲಿ ಪ್ರಮುಖ ಉಗ್ರರಾದ ಉಮರ್ ಫಾರೂಕ್, ಸಮೀರ್ ದಾರ್ ಮತ್ತು ಆದಿಲ್ ಅಹ್ಮದ್ ದಾರ್ ಗೆ ಆಹಾರ, ಆಶ್ರಯ ಮತ್ತು ಇತರ ಲಾಜಿಸ್ಟಿಕ್ಸ್ ಅನ್ನು 15ಕ್ಕೂ ಹೆಚ್ಚು ಬಾರಿ ಒದಗಿಸಿದ್ದಾರೆ. 2018 ಮತ್ತು 2019ರ ನಡುವೆ ಹಲವಾರು ಬಾರಿ ಉಗ್ರರಿಗೆ ಅವರ ಮನೆಯಲ್ಲೇ ಆಶ್ರಯ ನೀಡಿದ್ದಾರೆ.

ಫೆಬ್ರವರಿ 14, 2019ರಂದು ವರ್ಷ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಆತ್ಮಾಹುತಿ ಕಾರ್ ಬಾಂಬ್ ದಾಳಿ ಮಾಡಿದ್ದರು. ಇದರಲ್ಲಿ 40 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಒಟ್ಟು 19 ಉಗ್ರರ ವಿರುದ್ಧ 13,500 ಪುಟಗಳ ಚಾರ್ಜ್‍ಶಿಟ್ ಸಲ್ಲಿಕೆ ಮಾಡಲಾಗಿದೆ.

ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್, ಪ್ರಕರಣದ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದ್ದು, ಇವನ ಇಬ್ಬರು ಸಹೋದರರಾದ ರೌಫ್ ಅಝರ್ ಹಾಗೂ ಮೌಲಾನಾ ಮೊಹಮ್ಮದ್ ಅಮ್ಮರ್ ಸಹ ದಾಳಿಯಲ್ಲಿ ಭಾಗಿಯಾಗಿದ್ದರು. ಇದನ್ನು ಓದಿ: ಪುಲ್ವಾಮಾ ಕೇಸ್ – ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

ಎನ್‍ಐಎ ಎಸ್‍ಪಿ ರಾಕೇಶ್ ಬಲ್ವಾಲ್ ಅವರು ಜಮ್ಮು ಕಾಶ್ಮೀರದ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಒಟ್ಟು 19 ಆರೋಪಿಗಳ ಪೈಕಿ 7 ಜನ ಎನ್‍ಐಎ ಕಸ್ಟಡಿಯಲ್ಲಿದ್ದಾರೆ. ಉಳಿದ 7 ಜನ ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ವಿವಿಧ ಗುಂಡಿನ ಚಕಮಕಿ ವೇಳೆ 7 ಉಗ್ರರು ಸಾವನ್ನಪ್ಪಿದ್ದಾರೆ. ಐವರು ಪರಾರಿಯಾಗಿದ್ದಾರೆ. ಇದರಲ್ಲಿ ಮೂವರು ಪಾಕಿಸ್ತಾನದಲ್ಲಿದ್ದಾರೆ. ಇನ್ನಿಬ್ಬರು ಭಾರತದಲ್ಲೇ ತಲೆಮರೆಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *