Connect with us

Crime

ವಾಕಿಂಗ್ ಹೋಗ್ತಿದ್ದ ಬಿಜೆಪಿ ನಾಯಕನನ್ನು ಗುಂಡಿಟ್ಟು ಹತ್ಯೆಗೈದ ಉಗ್ರರು

Published

on

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೇ ಉಗ್ರರ ಗುರಿಯಾಗಿದೆ. ಇದೀಗ ಮತ್ತೊಬ್ಬ ಬಿಜೆಪಿ ಮುಖಂಡನ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ.

ಬಿಜೆಪಿ ನಾಯಕನನ್ನು ಅಬ್ದುಲ್ ಹಮೀದ್ ನಜರ್(38) ಎಂದು ಗುರುತಿಸಲಾಗಿದ್ದು, ಇವರು ಬುದ್ಗಾಮ್ ಜಿಲ್ಲೆಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾಗಿದ್ದಾರೆ.

ಭಾನುವಾರ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ವೇಳೆ ನಜರ್ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಶ್ರೀನಗರದ ಎಸ್‍ಹೆಚ್‍ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಭಾನುವಾರ ಘಟನೆ ನಡೆದ ಕೂಡಲೇ ಪ್ರದೇಶದ ಸುತ್ತ ಭದ್ರತಾ ಪಡೆಗಳು ಸುತ್ತುವರಿದು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರ ಪ್ರಕಾರ ನಜರ್ ಅವರಿಗೆ ಸುರಕ್ಷಿತ ವಸತಿ ಸೌಕರ್ಯಗಳನ್ನು ನೀಡಲಾಗಿತ್ತು. ಆದರೆ ಅವರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡದೆ ವಾಕಿಂಗ್ ಹೊರಟಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ನಜರ್ ಅವರನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡೇ ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಜೂನ್ ತಿಂಗಳಿಂದ ಬಿಜೆಪಿ ನಾಯಕರ ಮೇಲೆ ಉಗ್ರರು ದಾಳಿ ನಡೆಸುತ್ತಲೇ ಇದ್ದು, ಇದು 4ನೇ ಕೃತ್ಯವಾಗಿದೆ. ಆಗಸ್ಟ್ 6 ರಂದು ಕೂಡ ಭಯೋತ್ಪಾದಕರ ಗುಂಡಿನ ದಾಳಿಗೆ ಬಿಜೆಪಿ ನಾಯಕರೊಬ್ಬರು ಬಲಿಯಾಗಿದ್ದರು. ಕಳೆದ ತಿಂಗಳು ವಾಹೀಂ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

Click to comment

Leave a Reply

Your email address will not be published. Required fields are marked *