Connect with us

Latest

ಚುನಾವಣೆ ಸಂದರ್ಭದಲ್ಲಿ ಭಾರೀ ದಾಳಿಗೆ ಸಂಚು – ಸೇನೆ ಕಾರ್ಯಕ್ಕೆ ಮೋದಿ ಶ್ಲಾಘನೆ

Published

on

ನವದೆಹಲಿ: ನಿನ್ನೆ ಹತ್ಯೆಯಾದ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ)ಯ ಚುನಾವಣೆ ವೇಳೆ ಬೃಹತ್ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದು, ಜಮ್ಮು ಕಾಶ್ಮೀರದ ನಾಗ್ರೋಟಾದಲ್ಲಿ ಗುರುವಾರ ಭಾರತೀಯ ಸೇನೆಯ ಯೋಧರಿಂದ ಹತ್ಯಗೀಡಾದ ನಾಲ್ವರು ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಭಾರೀ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದರು. ಜಮ್ಮು ಕಾಶ್ಮೀರದಲ್ಲಿ ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿಯ ಚುನಾವಣೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಜಮ್ಮು ಕಾಶ್ಮೀರದಲ್ಲಿನ ತಳಮಟ್ಟದ ಪ್ರಜಾಪ್ರಭುತ್ವವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ.

ಎರಡು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ನಾಲ್ವರನ್ನು ಹೊಡೆದುರಿಳಿಸಲಾಗಿದೆ. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳು ಪತ್ತೆಯಾಗಿವೆ. ಇದರಿಂದ ದೊಡ್ಡ ಹಾನಿ ಮತ್ತು ವಿನಾಶದ ಪ್ರಯತ್ನವನ್ನು ಮತ್ತೊಮ್ಮೆ ವಿಫಲಗೊಳಿಸಿದಂತಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:

ಮತ್ತೊಂದು ಟ್ವೀಟ್‍ನಲ್ಲಿ, ನಮ್ಮ ಭದ್ರತಾ ಪಡೆ ಮತ್ತೊಮ್ಮೆ ಅತ್ಯಂತ ಧೈರ್ಯ ಹಾಗೂ ವೃತ್ತಿಪರತೆಯನ್ನು ಪ್ರದರ್ಶಿಸಿದ್ದಕ್ಕೆ ಧನ್ಯವಾದಗಳು. ಜಮ್ಮು ಖಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಗುರಿಯಾಗಿಸಿಕೊಂಡು ಎಸಗುತ್ತಿದ್ದ ದುಷ್ಕøತ್ಯವನ್ನು ಹತ್ತಿಕ್ಕಿದಂತಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಿ ಕಾರ್ಯದರ್ಶಿ ಹಾಗೂ ಗುಪ್ತಚರ ದಳದ ಉನ್ನತ ಅಧಿಕಾರಿಗಳು ನಾಗ್ರೋಟಾ ಎನ್‍ಕೌಂಟರ್ ಬಗ್ಗೆ ಚರ್ಚೆ ನಡೆಸಿದ್ದಾರೆ.

ನಾಲ್ವರು ಉಗ್ರರ ಹತ್ಯೆ
ಜಮ್ಮು ಕಾಶ್ಮೀರದ ನಾಗ್ರೋಟಾ ಪ್ರದೇಶದ ಬಾನ್ ಟೋಲ್ ಪ್ಲಾಜಾ ಬಳಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿತ್ತು. ಎನ್‍ಕೌಂಟರ್ ಹಾಗೂ ಪರಿಶೀಲನಾ ದೃಷ್ಟಿಯಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಅಲ್ಲದೆ ನಾಗ್ರೋಟಾ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿತ್ತು.

ಘಟನೆ ನಡೆದಿದ್ದ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿತ್ತು. ಭದ್ರತೆಗಾಗಿ ಹೆಚ್ಚುವರಿ ಪಡೆಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು. ಟೋಲ್ ಪ್ಲಾಜಾದಲ್ಲಿ ಭಯೋತ್ಪಾದಕರ ಗುಂಪನ್ನು ಅಡಗಿಸಿಟ್ಟಿದ್ದ ಟ್ರಕ್‍ನ್ನು ಭದ್ರತಾ ಪಡೆಗಳು ತಡೆದ ನಂತರ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿದ್ದರು.

ಭದ್ರತಾ ಪಡೆ ಬಾನ್ ಟೋಲ್ ಪ್ಲಾಜಾ ಬಳಿ ನಾಕಾ ಹಾಕುತ್ತಿದ್ದಂತೆ ವಾಹನಗಳ ತಪಾಸಣೆಯ ಸಮಯದಲ್ಲಿ ಭಯೋತ್ಪಾದಕರ ಗುಂಪು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿತ್ತು. ಭಯೋತ್ಪಾದಕರು ಅರಣ್ಯ ಪ್ರದೇಶದ ಕಡೆಗೆ ಓಡಿಹೋದರು. ಬಳಿಕ ಎನ್‍ಕೌಂಟರ್ ಪ್ರಾರಂಭವಾಗಿತ್ತು.

ಇತ್ತೀಚೆಗೆ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಿಂದ ಭಯೋತ್ಪಾದಕರ ಗುಂಪು ನುಸುಳುತ್ತಿವೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕರು ಟ್ರಕ್ ಒಳಗೆ ಅಡಗಿಕೊಂಡು ಕಾಶ್ಮೀರ ಕಣಿವೆಯಲ್ಲಿ ಸಾಗುತ್ತಿದ್ದರು. ಆಗ ಟ್ರಕ್ ತಡೆದು ತಪಾಸಣೆ ಮಾಡುವ ಸಮಯದಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದರು. ಟ್ರಕ್ ಒಳಗೆ ಇದ್ದ ಒಟ್ಟು ಭಯೋತ್ಪಾದಕರ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಟ್ರಕ್‍ನಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾನ್ ಟೋಲ್ ಪ್ಲಾಜಾ ಬಳಿ ನಡೆದ ಎನ್‍ಕೌಂಟರ್ ನಲ್ಲಿ ಎಲ್ಲ 4 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನಾಗ್ರೋಟಾ ಬಳಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

Click to comment

Leave a Reply

Your email address will not be published. Required fields are marked *

www.publictv.in