Connect with us

Latest

ರಾಷ್ಟ್ರ ಧ್ವಜ ಹಿಡಿಯಲ್ಲ ಎಂಬ ಮುಫ್ತಿ ಹೇಳಿಕೆ ಖಂಡಿಸಿ ಪಿಡಿಪಿಯ ಮೂವರು ನಾಯಕರು ರಾಜೀನಾಮೆ

Published

on

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮೂವರು ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರ ಧ್ವಜದ ಬಗ್ಗೆ ಮೆಹಬೂಬಾ ಮುಫ್ತಿ ಹೇಳಿಕೆ ಕುರಿತು ಅಸಮಾಧಾನಗೊಂಡು ಪಿಡಿಪಿಯ ಮೂವರು ಹಿರಿಯ ನಾಯಕರಾದ ಟಿ.ಎಸ್.ಬಜ್ವಾ, ವೆದ್ ಮಹಾಜನ್ ಹಾಗೂ ಹುಸೇನ್ ಎ ವಫ್ಫಾ ರಾಜೀನಾಮೆ ನೀಡಿದ್ದಾರೆ. ನೀವು ತೆಗೆದುಕೊಳ್ಳುತ್ತಿರುವ ಕೆಲ ನಿರ್ಧಾರಗಳಿಂದಾಗಿ ನಮಗೆ ಇರಿಸು ಮುರಿಸು ಉಂಟಾಗುತ್ತಿದ್ದು, ನಿಮ್ಮ ಅನಪೇಕ್ಷಿತ ಮಾತುಗಳು ಅದರಲ್ಲೂ ದೇಶಭಕ್ತಿಯ ಭಾವನೆಗೆ ನೋವುಂಟಾಗುವ ಮಾತುಗಳನ್ನು ಸಹಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ.

ತ್ರಿವರ್ಣ ಧ್ವಜದ ಬಗ್ಗೆ ಮೆಹಬೂಬಾ ಮುಫ್ತಿ ಹೇಳಿರುವ ಮಾತುಗಳನ್ನು ಖಂಡಿಸಿ ಜಮ್ಮು ಕಾಶ್ಮೀರದಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಇದರ ನಡುವೆಯೇ ಸ್ವತಃ ಅವರ ಪಕ್ಷದ ನಾಯಕರೇ ರಾಜೀನಾಮೆ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರಾಣಾ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿನ ಎಲ್ಲರೂ ತ್ರಿವರ್ಣ ಧ್ವಜವನ್ನು ಪ್ರೀತಿಸುತ್ತಾರೆ. ಹೀಗಾಗಿ ಶ್ರೀನಗರದ ಪ್ರತಿ ಬೀದಿಯಲ್ಲಿ ತಿರಂಗಾ ಬೃಹತ್ ರ್ಯಾಲಿ ನಡೆಸುತ್ತಿದ್ದಾರೆ ಎಂದಿದ್ದಾರೆ.

ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ವೇಳೆ ಮೆಹಬೂಬಾ ಮುಫ್ತಿ ಆಕ್ರೋಶ ಭರಿತರಾಗಿ ಮಾತನಾಡಿ, ಕಾಶ್ಮೀರದ ಧ್ವಜವನ್ನು ಮರುಸ್ಥಾಪಿಸುವವರೆಗೆ ನಾನು ತ್ರಿವರ್ಣ ಧ್ವಜವನ್ನು ಹಿಡಿಯುವುದಿಲ್ಲ ಎಂದಿದ್ದರು. ಬಿಜೆಪಿ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಕಾಶ್ಮೀರದ ರಾಜಕಾರಣಿಗಳು ಪ್ರತ್ಯೇಕತಾ ವಾದಿಗಳಿಂತ ಅಪಾಯಕಾರಿ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಿಡಿಕಾರಿದ್ದರು.

ಮುಫ್ತಿಯ ವಿವಾದಾತ್ಮಕ ಹೇಳಿಕೆಯಿಂದಾಗಿ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಜಮ್ಮುವಿನ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಿ ಗುಂಪೊಂದು ತ್ರಿವರ್ಣ ಧ್ವಜ ಸ್ಥಾಪಿಸಲು ಯತ್ನಿಸಿತ್ತು ಎಂದು ಪಿಡಿಪಿ ಆರೋಪಿಸಿದೆ. ಪಕ್ಷದ ಪ್ರಧಾನ ಕಚೇರಿಗೆ ಗುಂಪು ಆಗಮಿಸಿ ರಾಷ್ಟ್ರ ಧ್ವಜವನ್ನು ಸ್ಥಾಪಿಸಲು ಯತ್ನಿಸಿತು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದು ಬಲ ಪಂಥೀಯ ಗುಂಪಾಗಿತ್ತು. ಅದೇ ರೀತಿಯ ಪ್ರತ್ಯೇಕ ಬಣ್ಣದ ಬಟ್ಟೆ ಧರಿಸಿದ್ದರು ಎಂದು ಪಿಡಿಪಿ ಆರೋಪಿಸಿದೆ.

ಈ ಕುರಿತು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಝ್ ಈ ಕುರಿತು ಪ್ರತಿಕ್ರಿಯಿಸಿ, ಜಮ್ಮು ಕಾಶ್ಮೀರದ ಧ್ವಜವನ್ನು ಮರು ಸ್ಥಾಪಿಸುವ ಮೆಹಬೂಬಾ ಮುಫ್ತಿ ಹೇಳಿಕೆ ಜನರ ಆಶಯವನ್ನು ಪ್ರತಿಬಿಂಬಿಸಿದೆ. ಜಮ್ಮು ಕಾಶ್ಮೀರದ ಧ್ವಜ ಸ್ಥಾಪಿಸುವ ವರೆಗೆ ರಾಷ್ಟ್ರ ಧ್ವಜ ಹಿಡಿಯುವುದಿಲ್ಲ ಎಂದು ಮೆಹಬೂಬಾ ಮುಫ್ತಿ ಹೇಳಿರುವುದು ಜನರ ಭಾವನೆಯಾಗಿದೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in