Connect with us

Latest

ಜಮ್ಮು ಕಾಶ್ಮೀರದಲ್ಲಿ ಉಗ್ರರ ಮಾರಣಹೋಮ – ಇಬ್ಬರು ಭಯೋತ್ಪಾದಕರು ಮಟಾಷ್

Published

on

– ಉಗ್ರ ರಹಿತ ಪ್ರದೇಶವಾದ ಕಾಶ್ಮೀರದ ದೋಡಾ ಜಿಲ್ಲೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಭಾರತೀಯ ಸೇನೆಯ ಬಂದೂಕುಗಳು ಸಖತ್ ಸದ್ದು ಮಾಡುತ್ತಿದ್ದು, ಇಂದು ಕೂಡ ಇಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಜೊತೆಗೆ ಓರ್ವನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ.

ಕಳೆದ ವಾರವಷ್ಟೇ ಪುಲ್ವಾಮಾ ಜಿಲ್ಲೆಯಲ್ಲಿ ದಾಳಿ ಮಾಡಿದ್ದ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದು ಹಾಕಿತ್ತು. ಇಂದು ಕೂಡ ಭಾರತೀಯ ಸೇನೆ ಮತ್ತು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ಜಮ್ಮು ಕಾಶ್ಮೀರದ ಅನಂತ್‍ನಾಗ್‍ನ ವಾಘಮಾ ಪ್ರದೇಶದಲ್ಲಿ ಇಬ್ಬರು ಅನಾಮಧೇಯ ಉಗ್ರರನ್ನು ಕೊಂದು ಹಾಕಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್, ಇಂದು ನಡೆದ ವಾಘಮಾ ದಾಳಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಬಿಜ್ಬೆಹರಾದಲ್ಲಿ ನಮ್ಮ ಓರ್ವ ಯೋಧ ಹಾಗೂ 5 ವರ್ಷದ ಬಾಲಕನನ್ನು ಕೊಂದು ಹಾಕಿದ್ದ ಇಬ್ಬರು ಭಯೋತ್ಪಾದಕರನ್ನು ನಮ್ಮ ಸೇನೆ ಹೊಡೆದು ಹಾಕಿದೆ. ನೆನ್ನೆ ತಾನೇ ದೋಡಾ ಪ್ರದೇಶದಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದು ಹಾಕಿತ್ತು. ಇದಾದ ನಂತರ ಇಂದು ಇಬ್ಬರು ಉಗ್ರರನ್ನು ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಸೋಮವಾರ ಮಾತನಾಡಿದ್ದ ದಿಲ್ಬಾಗ್ ಸಿಂಗ್, ಸ್ಥಳೀಯ ಆರ್‍ಆರ್ ಘಟಕದೊಂದಿಗೆ ಅನಂತ್‍ನಾಗ್‍ನ ಖುಲ್‍ಚೋಹರ್ ಪ್ರದೇಶದಲ್ಲಿ ಇಂದಿನ ಕಾರ್ಯಾಚರಣೆಯಲ್ಲಿ, ಓರ್ವ ಉಗ್ರ ಕಮಾಂಡರ್ ಮತ್ತು ಒಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಕಮಾಂಡರ್ ಮಸೂದ್ ಸೇರಿದಂತೆ 2 ಲಷ್ಕರ್-ಎ-ತೈಬಾ ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಈ ಮೂಲಕ ಜಮ್ಮು ವಲಯದ ದೋಡಾ ಜಿಲ್ಲೆಯು ಮತ್ತೊಮ್ಮೆ ಸಂಪೂರ್ಣವಾಗಿ ಉಗ್ರ ರಹಿತ ಪ್ರದೇಶವಾಗಿದೆ ಎಂದು ಹೇಳಿದ್ದರು.

ಜೂನ್ 23ರಂದು ಪುಲ್ವಾಮಾ ಜಿಲ್ಲೆಯ ಬಾಂಡ್‍ಜೊ ಗ್ರಾಮದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಪುಲ್ವಾಮಾ-ಶೋಪಿಯಾನ್ ರಸ್ತೆಯ ಪುಲ್ವಾಮಾ ಪಟ್ಟಣದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಬಾಂಡ್‍ಜೊ ಗ್ರಾಮದಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದು ಹಾಕಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.