Connect with us

Latest

ಚೀನಾ ಸಹಾಯದಿಂದ ಮತ್ತೆ 370ನೇ ವಿಧಿ ಜಾರಿ – ಫಾರೂಕ್ ಅಬ್ದುಲ್ಲಾ

Published

on

ನವದೆಹಲಿ: ಚೀನಾದ ಬೆಂಬಲ ಪಡೆದು ಜಮ್ಮು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೆ ತರುವ ಆಶಯವನ್ನು ಹೊಂದಿದ್ದೇನೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾದಿಂದಲೇ ಲಡಾಖ್‍ನ ವಾಸ್ತವ ಗಡಿ ರೇಖೆ(ಎಲ್‍ಎಸಿ)ಯ ಬಳಿ ಚೀನಾ ಆಕ್ರಮಣ ಮಾಡುತ್ತಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ 370ನೇ ವಿಧಿ ರದ್ದತಿಯನ್ನು ಚೀನಾ ಒಪ್ಪಿಕೊಂಡಿಲ್ಲ. ಹೀಗಾಗಿ ಚೀನಾದ ಬೆಂಬಲದಿಂದಾಗಿ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುವ ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಲಡಾಖ್‍ನ ಎಲ್‍ಎಸಿ ಬಳಿ ಚೀನಾ ಏನೇನು ಮಾಡುತ್ತಿದೆಯೋ ಅದಕ್ಕೆಲ್ಲ 370ನೇ ವಿಧಿಯೇ ಕಾರಣ. ಇದನ್ನು ಅವರು ಎಂದೂ ಒಪ್ಪುವುದಿಲ್ಲ. ಅವರ ಬೆಂಬಲದಿಂದಲೇ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುವ ಆಶಯ ಹೊಂದಿದ್ದೇನೆ. 2019ರ ಆಗಸ್ಟ್ 5ರಂದು ಸರ್ಕಾರ ಮಾಡಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಜಮ್ಮು ಕಾಶ್ಮೀರದ ಸಮಸ್ಯೆಗಳ ಬಗ್ಗೆ ಮಾತನಾಡಲು ಸಂಸತ್‍ನಲ್ಲಿ ನನಗೆ ಅವಕಾಶವನ್ನೇ ಕೊಟ್ಟಿಲ್ಲ ಎಂದು ಅವರು ತಿಳಿಸಿದರು.

ಜಮ್ಮು ಕಾಶ್ಮೀರಕ್ಕೆ 370 ಹಾಗೂ 35ಎ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಜಮ್ಮುಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಡಿಸಲಾಗಿದೆ. ಕಳೆದ ವರ್ಷ ಆಗಸ್ಟ್ 5ರಂದು ಗೃಹ ಸಚಿವ ಅಮಿತ್ ಶಾ ಸಂಸತ್‍ನಲ್ಲಿ ಮಸೂದೆಯನ್ನು ಮಂಡಿಸಿ ಜಾರಿಗೊಳಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆರವುಗೊಳಿಸಿದರು. ಬಳಿಕ 2ನೇ ನಿರ್ಣಯ ಕೈಗೊಳ್ಳುವ ಮೂಲಕ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಡಿಸಲಾಯಿತು. ಇದಾದ ಬಳಿಕ 2019ರ ಅಕ್ಟೋಬರ್ 31ರಿಂದ ಹೊಸ ಆಡಳಿತ ಜಾರಿಗೆ ಬಂದಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನವನ್ನು ರದ್ದುಪಡಿಸಿದ ಬಳಿಕ ಅಲ್ಲಿನ ಹಲವು ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಈ ಪೈಕಿ ಫಾರೂಕ್ ಅಬ್ದುಲ್ಲಾ, ಅವರ ಮಗ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.

Click to comment

Leave a Reply

Your email address will not be published. Required fields are marked *