Connect with us

Cinema

ಜೇಮ್ಸ್ ಶೂಟಿಂಗ್ ವೇಳೆ ಪೊಲೀಸರ ಜೊತೆ ಕೊರೊನಾ ಜಾಗೃತಿ ಮೂಡಿಸಿದ ಅಪ್ಪು

Published

on

ಕೊಪ್ಪಳ: ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ನಟ ಪುನೀತ್ ರಾಜ್‍ಕುಮಾರ್ ಸಹ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದೇ ಗ್ಯಾಪ್‍ನಲ್ಲಿ ಕೊರೊನಾ ಜಾಗೃತಿಯನ್ನು ಸಹ ಮೂಡಿಸಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಜೇಮ್ಸ್ ಶೂಟಿಂಗ್ ಭರದಿಂದ ಸಾಗಿದ್ದು, ಬೃಹತ್ ಸೆಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇನ್ನೂ ಕೆಲ ದಿನಗಳ ಕಾಲ ಚಿತ್ರ ತಂಡ ಗಂಗಾವತಿಯಲ್ಲಿಯೇ ಬೀಡು ಬಿಡಲಿದೆ. ಇದೇ ಗ್ಯಾಪ್‍ನಲ್ಲಿ ಬಿಡುವು ಮಾಡಿಕೊಂಡ ಅಪ್ಪು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಕೊರೊನಾ ಜಾಥಾದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದ್ದಾರೆ.

ಜೇಮ್ಸ್ ಚಿತ್ರೀಕರಣ ನಡೆಯುತ್ತಿರುವುದನ್ನು ಅರಿತ ಪೊಲೀಸರು ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇದು ಕೂಡ ನನ್ನ ಕರ್ತವ್ಯ ಎಂದು ಅಷ್ಟೇ ಖುಷಿಯಿಂದ ಅಪ್ಪು ಕಾರ್ಯಕ್ರಮದಲ್ಲಿ ಹಾಜರಾಗಿ ಜನರಿಗೆ ಕೊರೊನಾ ಬಗ್ಗೆ ತಿಳಿ ಹೇಳಿದ್ದಾರೆ. ಕೊರೊನಾದಿಂದ ಸುರಕ್ಷಿತರಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಪುನೀತ್ ರಾಜ್‍ಕುಮಾರ್ ಆಗಮಿಸುವುದನ್ನು ತಿಳಿದಿದ್ದ ಅಭಿಮಾನಿಗಳು ಹಾಗೂ ಸುತ್ತಲಿನ ಗ್ರಾಮಗಳ ಜನ, ನೆಚ್ಚಿನ ನಟನನ್ನು ಕಂಡು ಕೆಕೆ, ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಖುಷಿಪಟ್ಟರು. ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಭಾಗವಹಿಸುತ್ತಾರೆ. ಸರ್ಕಾರದ ಹಲವು ಜಾಹಿರಾತುಗಳ ಮೂಲಕ ಸಹ ಅಪ್ಪು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಇದೀಗ ಪೊಲೀಸರ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪುನೀತ್ ಜೊತೆ ಅನುಪ್ರಭಾಕರ್ ಸಹ ಮಾತನಾಡಿ, ಕೋವಿಡ್ ಬಗ್ಗೆ ಜನರಿಗೆ ತಿಳಿ ಹೇಳಿದ್ದಾರೆ.

ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಲಾಕ್‍ಡೌನ್ ವೇಳೆ ಬಿಡುವು ಪಡೆದಿದ್ದರು. ಯುವರತ್ನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಎನ್ನಲಾಗಿದ್ದು, ಹೀಗಾಗಿಯೇ ಜೇಮ್ಸ್ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಅಭಿಮಾನಿಗಳು ಯುವರತ್ನ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್‍ನಲ್ಲಿ ಯುವರತ್ನ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿತು. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ. ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಇದೇ ವೇಳೆ ಜೇಮ್ಸ್ ಚಿತ್ರದ ಶೂಟಿಂಗ್ ಆರಂಭಿಸಲಾಗಿದೆ. ಇತ್ತೀಚೆಗಷ್ಟೇ ಹಿರೋಯಿನ್ ಚಿತ್ರ ತಂಡ ಸೇರಿಕೊಂಡಿದ್ದು, ತಮಿಳು ನಟಿ ಪ್ರಿಯಾ ಆನಂದ್ ಶೂಟಿಂಗ್‍ನಲ್ಲಿ ಭಾಗವಹಿಸಿದ್ದಾರೆ. ಇನ್ನೂ ವಿಶೇಷ ಎಂಬಂತೆ ಟಾಲಿವುಡ್ ನಟ ಶ್ರೀಕಾಂತ್ ಅವರು ಜೇಮ್ಸ್ ಚಿತ್ರ ತಂಡ ಸೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಚಿತ್ರ ತಂಡ ಖಚಿತಪಡಿಸಿಲ್ಲ.

ಜೇಮ್ಸ್ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದ್ದು, ತೆಲುಗು ಫೈಟ್ ಮಾಸ್ಟರ್ ಗಳಾದ ರಾಮ್-ಲಕ್ಷ್ಮಣ್ ಅವರು ಸಹ ಚಿತ್ರ ತಂಡ ಸೇರಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಂದಹಾಗೆ ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದು, ಕಿಶೋರ್ ಪತಿಕೊಂಡ ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಶ್ರೀಷಾ ಕುದುವಲ್ಲಿ ಛಾಯಾಗ್ರಹಣವಿದೆ.

Click to comment

Leave a Reply

Your email address will not be published. Required fields are marked *

www.publictv.in