Tuesday, 10th December 2019

Recent News

ಜಲ್ಲಿಕಟ್ಟು ಮಾರಾಮಾರಿ – ಪೊಲೀಸರನ್ನೇ ಓಡಿಸಿ ಹಲ್ಲೆಗೈದ ಗ್ರಾಮಸ್ಥರು

– ಪೊಲೀಸ್ ಸಿಬ್ಬಂದಿ ಸೇರಿ 10 ಜನರಿಗೆ ಗಾಯ
– ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನ, ಪೊಲೀಸ್ ಜೀಪ್ ಜಖಂ

ಬೆಂಗಳೂರು: ಜಲ್ಲಿಕಟ್ಟು ನಿಲ್ಲಿಸುವಂತೆ ವಾರ್ನಿಂಗ್ ನೀಡಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕರ್ನಾಟಕ ತಮಿಳುನಾಡು ಗಡಿಭಾಗದ ಮದಗೊಂಡಪಲ್ಲಿ ಗ್ರಾಮದಲ್ಲಿ ನಡೆದಿದೆ.

ಈ ಘಟನೆಯಲ್ಲಿ 5 ಜನ ಪೊಲೀಸ್ ಸಿಬ್ಬಂದಿ, ಐವರು ಸಾರ್ವಜನಿಕರು ಗಾಯಗೊಂಡಿದ್ದು, ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನ, ಪೊಲೀಸ್ ಜೀಪ್ ಸೇರಿದಂತೆ ಸ್ಥಳದಲ್ಲಿದ್ದ ವಾಹನಗಳು ಜಖಂಗೊಂಡಿವೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಘಟನೆಯ ಹೇಗಾಯ್ತು?:
ಜಲ್ಲಿಕಟ್ಟು ನಡೆಸಲು ಆಯೋಜಕರು ಅನುಮತಿ ಪಡೆದಿದ್ದರು. ಆದರೆ ನಿರೀಕ್ಷೆಗೂ ಮೀರಿ ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಬಂದಿದ್ದರು. ಹೋರಿಗಳನ್ನು ಒಟ್ಟಾಗಿ ಬಿಟ್ಟರೆ ಸಾವು, ನೋವು ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಒಂದೊಂದೇ ಹೋರಿಗಳನ್ನು ಬಿಡುವಂತೆ ಪೊಲೀಸರು, ಜಲ್ಲಿಕಟ್ಟು ಆಯೋಜಕರಲ್ಲಿ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಚರ್ಚೆ ನಡೆಯುತ್ತಿದ್ದಾಗ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ.

ಕಲ್ಲೇಟು ಬಿದ್ದ ಕೂಡಲೇ ಪೊಲೀಸರು ಕೆಲ ಯುವಕರ ಮೇಲೆ ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಪೊಲೀಸ್ ಲಾಠಿ ಚಾರ್ಜ್ ನಿಂದ ಕೋಪಗೊಂಡ ಜನರು, ಸ್ಥಳದಲ್ಲಿ ನಿಂತಿದ್ದ ಪೊಲೀಸ್ ಜೀಪ್, ಅಗ್ನಿಶಾಮಕ ದಳದ ವಾಹನ, ಅಂಬ್ಯುಲೆನ್ಸ್ ಮೇಲೆ ಕಲ್ಲು ತೂರಿದ್ದಾರೆ. ಇದರಿಂದಾಗಿ ಅಲ್ಲಿದ್ದ ವಾಹನಗಳ ಗಾಜುಗಳು ಜಖಂಗೊಂಡಿದ್ದು, 5 ಜನ ಪೊಲೀಸರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರನ್ನೇ ಗ್ರಾಮಸ್ಥರು ಓಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *