Sunday, 15th December 2019

ಭಾರತಕ್ಕೆ ದೊಡ್ಡ ಜಯ, ಪಾಕಿಗೆ ಮುಖಭಂಗ – ಅಜರ್ ಈಗ ಜಾಗತಿಕ ಉಗ್ರನೆಂದು ಘೋಷಣೆ

ನ್ಯೂಯಾರ್ಕ್: ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ. ಈ ಮೂಲಕ ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಜಯ ಸಿಕ್ಕಿದ್ದು ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಭಾರತ ವಿಶ್ವಸಂಸ್ಥೆಯಲ್ಲಿ ಬಹಳ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿತ್ತು. ಭಾರತದ ಈ ನಿರ್ಧಾರಕ್ಕೆ ಚೀನಾ ತನ್ನ ವಿಟೋವನ್ನು ಬಳಸಿ ನಾಲ್ಕು ಬಾರಿ ತಾಂತ್ರಿಕ ನೆಲೆಯಲ್ಲಿ ಅಡ್ಡಗಾಲು ಹಾಕಿತ್ತು. ಆದರೆ ಈಗ ತಾನು ಒಡ್ಡಿದ್ದ ತಾಂತ್ರಿಕ ತಡೆಯನ್ನು ಚೀನಾ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಈಗ ಜಾಗತಿಕ ಉಗ್ರನೆಂದು ಘೋಷಿಸಲ್ಪಟ್ಟಿದ್ದಾನೆ.

ವಿಶ್ವಸಂಸ್ಥೆಯಲ್ಲಿರುವ ಭಾರತೀಯ ರಾಯಭಾರಿ ಸೈಯ್ಯದ್ ಅಕ್ಬರುದ್ದೀನ್ ಅವರು ಈ ವಿಚಾರವನ್ನು ಖಚಿತ ಪಡಿಸಿದ್ದು, ಭಾರತದ ಪ್ರಸ್ತಾಪಕ್ಕೆ ಎಲ್ಲರು ಬೆಂಬಲ ನೀಡಿದ್ದರಿಂದ ಅಜರ್ ಜಾಗತಿಕ ಉಗ್ರನೆಂದು ಘೋಷಣೆಯಾಗಿದ್ದಾನೆ ಎಂದು ಹೇಳಿದ್ದಾರೆ.

ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಣೆಯಾದ ಬಳಿಕ ಆತನ ಆಸ್ತಿ, ಪ್ರಯಾಣದ ಮೇಲೆ ನಿರ್ಬಂಧ ಬೀಳಲಿದೆ. ಆತನ ಇಡೀ ಆಸ್ತಿ ಸರ್ಕಾರ ಪಾಲಾಗುತ್ತದೆ. ಬೇರೆ ಯಾವ ರಾಷ್ಟ್ರಗಳು ಕೂಡ ಆತನಿಗೆ ಹಣ ಸಹಾಯ ನೀಡಲು ಸಾಧ್ಯವಿಲ್ಲ.

ಇಲ್ಲಿಯವರೆಗೆ ಏನಾಗಿತ್ತು?
ಮುಂಬೈ ದಾಳಿ ಬಳಿಕ ಕಳೆದ 10 ವರ್ಷಗಳಿಂದ ಭಾರತ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ನಿರಂತರ ಪ್ರಯತ್ನ ನಡೆಸುತಿತ್ತು. ಆದರೆ ಪಾಕಿಸ್ತಾನದ ಉಗ್ರವಾದಕ್ಕೆ ಬೆಂಬಲ ನೀಡುವ ಕುತಂತ್ರಿ ಬುದ್ಧಿಯನ್ನು ಚೀನಾ ಪ್ರದರ್ಶನ ಮಾಡಿ ಮಸೂದ್ ಅಜರ್ ನನ್ನು ರಕ್ಷಣೆ ಮಾಡುತ್ತಲೇ ಬರುತಿತ್ತು. ಭದ್ರತಾ ಮಂಡಳಿಯಲ್ಲಿರುವ ಉಳಿದ ರಾಷ್ಟ್ರಗಳು ಒಂದು ನಿಲುವು ಪ್ರದರ್ಶನ ಮಾಡಿದರೆ ಚೀನಾ ಇದಕ್ಕೆ ಅಡ್ಡಗಾಲು ಹಾಕುತಿತ್ತು. ಈ ವರ್ಷದ ಮಾರ್ಚ್ ತಿಂಗಳಿನಲ್ಲೂ ಚೀನಾ ಅಡ್ಡಿ ಪಡಿಸಿತ್ತು. ಈ ವೇಳೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಚೀನಾ ತನ್ನ ನಿಲುವನ್ನು ಮುಂದುವರಿಸಿದರೆ ಬಲವಂತವಾಗಿ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿರುವ ಅಮೆರಿಕದ ರಾಯಭಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.

ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ಬಳಿಕ ಮಸೂದ್ ಅಜರ್ ನೇತ್ರತ್ವದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಇದು ತನ್ನ ಕೃತ್ಯ ಎಂದು ಹೊಣೆ ಹೊತ್ತುಕೊಂಡಿತ್ತು. ಪರಿಣಾಮ ಭಾರತದ ಮನವಿಯಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಫೆ.27 ರಂದು ಪ್ರಸ್ತಾವನೆ ರವಾನಿಸಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ಚೀನಾ ಈ ಪ್ರಸ್ತಾವನೆಗೆ ತಡೆ ನೀಡಿತ್ತು.

ಜೈಶ್-ಇ-ಮೊಹಮ್ಮದ್ ಸಂಘಟನೆ ತನ್ನದೇ ಕೃತ್ಯ ಎಂದು ಒಪ್ಪಿಕೊಂಡ ಬಳಿಕವೂ ಕೂಡ ಚೀನಾ ಅಜರ್‌ಗೆ ಬೆಂಬಲ ನೀಡಿರುವುದರ ವಿರುದ್ಧ ಭದ್ರತಾ ಮಂಡಳಿ ಸದಸ್ಯರು ಟೀಕೆ ಮಾಡಿದ್ದರು.

Leave a Reply

Your email address will not be published. Required fields are marked *