Saturday, 20th July 2019

ಯಾರದ್ದೋ ಹೆಸ್ರಲ್ಲಿ ಮಂಡ್ಯದಲ್ಲಿ ಬೇಳೆ ಬೇಯಿಸೋಕೆ ಆಗಲ್ಲ: ಪುಟ್ಟರಾಜು ಟಾಂಗ್

ಮಂಡ್ಯ: ಯಾರದ್ದೋ ಹೆಸರನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಬೇಳೆ ಬೇಯಿಸೋಕೆ ಆಗಲ್ಲ ಎಂದು ನಟರಾದ ದರ್ಶನ್ ಹಾಗು ಯಶ್ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆತರುತ್ತಿರುವ ಸುಮಲತಾರಿಗೆ ಸಚಿವ ಪುಟ್ಟರಾಜು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕತ್ತಲೆಯಲ್ಲಿ ನಿಂತು ಅವಿವೇಕಿಗಳು ಕಲ್ಲು ಹೊಡೆದರೆ ನಾವು ಹೆದರಲ್ಲ. ಇನ್ನೂ ಅದೆಷ್ಟು ಕಲ್ಲು ಹೊಡೆಸ್ತಾರೋ ಹೊಡೆಸಲಿ ಇದರಿಂದ ಯಾರು ದೇವೇಗೌಡರ ಕುಟುಂಬದವರನ್ನಾಗಲಿ, ಜೆಡಿಎಸ್ ಅವರನ್ನಾಗಲಿ ಹೆದರಿಸಲು ಆಗಲ್ಲ. ಮುಂದೆ ನಮ್ಮ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ದರ್ಶನ್ ಮನೆ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ ಎಂಬ ಸುಮಲತಾ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಸುಮಲತಾ ಅವರು ಯಾವ ದೂರದೃಷ್ಟಿಯಲ್ಲಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಮಂಡ್ಯ ಜನ ಸ್ವಾಭಿಮಾನಕ್ಕೆ ಹೆಸರಾದವರು. ಕತ್ತಲಲ್ಲಿ ನಿಂತು ರಾಜಕಾರಣ ಮಾಡಿರೋದು ಜೆಡಿಎಸ್ ಇತಿಹಾಸದಲ್ಲೇ ಇಲ್ಲ. ಯಾರೋ ಅಭಿಮಾನಿಗಳ ಹೆಸರಲ್ಲಿ ಈ ಕೃತ್ಯ ನಡೆಸಿದ್ದಾರೆ. ದರ್ಶನ್ ಮನೆ ಮೇಲೆ ನಡೆದಿರುವ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಅಲ್ಲದೆ ಯಾರ ಅಭಿಮಾನಿಗಳು ಆಗಿದ್ದರು ಸರಿ ದಾಳಿ ಮಾಡಿರೋದು ತಪ್ಪು. ನಾವು ಮಂಡ್ಯದಲ್ಲಿ ಒಳ್ಳೆ ರೀತಿಯಲ್ಲೆ ಚುನಾವಣೆ ನಡೆಸಿಕೊಂಡು ಬಂದಿದ್ದೇವೆ. ಯಾರು ಕೂಡ ಬೆರಳು ಮಾಡುವ ರೀತಿ ಯಾವತ್ತಿಗೂ ಮಾಡಿಕೊಂಡಿಲ್ಲ. ಹಿಂದೆ ಅಂಬರೀಶ್ ಅವರನ್ನು ಸೋಲಿಸಿದಾಗಲೂ ಎರಡೇ ದಿನಕ್ಕೆ ಜೊತೆಯಲ್ಲೇ ಕುಳಿತು ನಾವು ಊಟ ಮಾಡಿದ್ದೇವೆ. ಈ ರೀತಿಯ ಘಟನೆಗಳು ಮಂಡ್ಯ ಜನ ಸಹಿಸಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *