Tuesday, 20th November 2018

Recent News

ಬಿಎಸ್‍ವೈ ದುಡ್ಡು ಇಟ್ಟಿರೋ ಕರಂದ್ಲಾಜೆ ನಿವಾಸದ ಮೇಲೆ ಐಟಿ ದಾಳಿಯಾಗಬೇಕು: ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಸಂಸದೆ ಶೋಭಾ ಕರಂದ್ಲಾಜೆ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಬೇಕೆಂದು ಮಾಜಿ ಬಿಜೆಪಿ ಶಾಸಕ, ಹಾಲಿ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಟಿಕೆಟ್ ನೀಡಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅನೇಕ ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಅಲ್ಲದೇ ಆ ಹಣವನ್ನು ಸಂಸದೆ ಶೋಭಾ ಕರಂದ್ಲಾಜೆ ಮನೆಯಲ್ಲಿ ಬಚ್ಚಿಟ್ಟಿದ್ದಾರೆ. ಹೀಗಾಗಿ ಶೋಭಾ ಅವರ ಮನೆ ಮೇಲೆ ಐಟಿ ದಾಳಿಯಾಬೇಕು ಎಂದು ಒತ್ತಾಯಿಸಿದರು.

ಟಿಕೆಟ್ ಹಂಚಲು ಎ, ಬಿ ಹಾಗೂ ಸಿ ಅಂತಾ ಸೀಟ್ ಎಂದು ವಿಂಗಡನೆ ಮಾಡಿದ್ದರು. ಎ ಸೀಟ್‍ಗೆ 3 ಕೋಟಿ ರೂ., ಬಿ ಸೀಟ್‍ಗೆ 5 ಕೋಟಿ ರೂ. ಹಾಗೂ ಸಿ ಸೀಟ್‍ಗೆ 8 ಕೋಟಿ ರೂ. ಪಡೆದಿದ್ದಾರೆ. ಅಭ್ಯರ್ಥಿಗಳಿಂದ ಪಡೆದ ಹಣವನ್ನು ಶೋಭಾ ಕರಂದ್ಲಾಜೆ ಅವರ ಮನೆಯಲ್ಲಿ ಇಟ್ಟಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿದರೆ ಸತ್ಯ ಬೆಳಕಿಗೆ ಬರಲಿದೆ ಎಂದು ತಿಳಿಸಿದರು.

ಸದ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನೇ ಐಟಿ ಹಾಗೂ ಇಡಿ ಅಧಿಕಾರಿಗಳು ಸುತ್ತುವರಿಯುತ್ತಿದ್ದಾರೆ. ಇದರಿಂದ ಬಿಜೆಪಿ ನಾಯಕರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಒಂದು ಬಾರಿ ಸಂಸದೆ ಶೋಭಾ ಕರಂದ್ಲಾಜೆ ಮನೆ ಮೇಲೆ ದಾಳಿ ಮಾಡಲಿ. ಆಗ ಯಾವ ರಾಜಕೀಯ ನಾಯಕರ ಬಳಿ ಹೆಚ್ಚು ಹಣವಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.

ನನಗೆ ಮೋಸ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆಯೂ ಮೋಸ ಮಾಡಿದ್ದಾರೆ. ಹೀಗಾಗಿ ನನ್ನ ಹರಕೆ ಈಡೇರಿದೆ ಎನ್ನುವ ತೃಪ್ತಿಯಿದೆ. ರಾಜ್ಯ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಾರದೇ ಹೋಗಿದ್ದರೆ ಬಿಜೆಪಿ 70 ಸ್ಥಾನ ಕೂಡಾ ಪಡೆಯುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಪವಿತ್ರ ಮೈತ್ರಿ ಎನ್ನುತ್ತಿದ್ದಾರೆ. ಹಾಗಾದರೆ ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾಲು ಬಿದ್ದು ಉಪಮುಖ್ಯಮಂತ್ರಿ ಸ್ಥಾನ ನೀಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಬೇಡಿಕೊಂಡಿದ್ದನ್ನು ಬಿಎಸ್‍ವೈ ಮರೆತಿದ್ದಾರೆ. ತಮ್ಮಲ್ಲಿ ಉಂಟಾದ ಹತಾಶೆ ಭಾವನೆಯಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಬೇಳೂರು ಗೇಲಿ ಮಾಡಿದರು.

Leave a Reply

Your email address will not be published. Required fields are marked *