Thursday, 12th December 2019

ಜುಲೈ 22ಕ್ಕೆ ಚಂದ್ರಯಾನ 2 ಉಡಾವಣೆ – ಇಸ್ರೋ ಪ್ರಕಟಣೆ

ನವದೆಹಲಿ: ತಾಂತ್ರಿಕ ದೋಷದಿಂದ ಜುಲೈ 15 ರಂದು ಉಡಾವಣೆ ಆಗಬೇಕಿದ್ದ ಚಂದ್ರಯಾನ-2 ಕೊನೆ ಕ್ಷಣದಲ್ಲಿ ಮುಂದೂಡಲಾಗಿತ್ತು. ಈಗ ಇಸ್ರೋ ಜುಲೈ 22 ರಂದು ಉಡಾವಣೆ ಮಾಡುವುದಾಗಿ ತಿಳಿಸಿದೆ.

ಜುಲೈ 15 ಬೆಳಗ್ಗೆ 2.51 ಕ್ಕೆ ಚಂದ್ರಯಾನ-2 ಉಡಾವಣೆಗೆ ಆಗಬೇಕಿತ್ತು. ಆದರೆ ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ಉಡಾವಣಾ ವಾಹನದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಇಸ್ರೋ ಸುದ್ದಿಗೋಷ್ಠಿ ಕರೆದು ಚಂದ್ರಯಾನ-2 ರದ್ದು ಮಾಡಲಾಗಿದ್ದು, ಶೀಘ್ರದಲ್ಲಿಯೇ ಮುಂದಿನ ಉಡಾವಣಾ ಸಮಯ ಘೋಷಿಸುವುದಾಗಿ ಹೇಳಿತ್ತು.

ಈಗ ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಇಸ್ರೋ, “ಜುಲೈ 15 ರಂದು ತಾಂತ್ರಿಕ ದೋಷದ ಕಾರಣದಿಂದ ಮುಂದೂಡಿದ್ದ, ಚಂದ್ರಯಾನ-2 ಉಡಾವಣೆಯನ್ನು ಮುಂದಿನ ಸೋಮವಾರ ಅಂದರೆ ಜುಲೈ 22 ಮಧ್ಯಾಹ್ನ 2.43ಕ್ಕೆ ಮತ್ತೆ ದಿನ ನಿಗದಿಮಾಡಲಾಗಿದೆ” ಎಂದು ಟ್ವೀಟ್ ಮಾಡಿದೆ.

ರದ್ದಾಗಿದ್ದು ಯಾಕೆ?
ಜಿಎಸ್‍ಎಲ್‍ವಿ-ಎಂಕೆ-3 ರಾಕೆಟ್‍ನಲ್ಲಿದ್ದ ಕ್ರಯೋಜೆನಿಕ್ ಎಂಜಿನ್‍ನ ಹೀಲಿಯಂ ಬಾಟಲ್‍ನಲ್ಲಿ ಸೋರಿಕೆ ಉಂಟಾಗಿದ್ದರಿಂದ ಉಡ್ಡಾಯನವನ್ನು ಮುಂದೂಡಲಾಗಿತ್ತು. ರಾಕೆಟ್ ನಿಗದಿತ ವೇಗ ಹಾಗೂ ಒತ್ತಡದಲ್ಲಿ ಆಕಾಶಕ್ಕೆ ನೆಗೆಯಲು ದ್ರವ ರೂಪದ ಆಕ್ಸಿಜನ್ ಹಾಗೂ ಹೈಡ್ರೋಜನ್ ಇಂಧನಗಳನ್ನು ರಾಕೆಟ್‍ಗೆ ತುಂಬಲಾಗುತ್ತದೆ. ಇದಾದ ನಂತರ ಹೀಲಿಯಂ ತುಂಬಿಸಲಾಗುತ್ತದೆ. ಹೀಲಿಯಂ ತುಂಬಿದ ಬಳಿಕ ಮಾನಿಟರ್‍ ನಲ್ಲಿ ಪ್ರೆಶರ್ ಕಡಿಮೆಯಾಗುವುದು ಕಂಡು ಬಂದಿದೆ. ಹೀಲಿಯಂ ಸೋರಿಕೆ ಆಗುತ್ತಿರುವುದನ್ನು ಗಮನಿಸಿದ ವಿಜ್ಞಾನಿಗಳು ಉಡಾವಣೆಯನ್ನು ರದ್ದುಗೊಳಿಸಿದ್ದರು.

ಈ ಯೋಜನೆ ಭಾರತದ ಮಹತ್ತರ ಯೋಜನೆಯಾಗಿದ್ದು, ಇದಕ್ಕೆ ಸುಮಾರು 978 ಕೋಟಿ ವೆಚ್ಚವಾಗಿದೆ. ಇದರಲ್ಲಿ ಉಪಗ್ರಹದ ವೆಚ್ಚ 603 ಕೋಟಿ, ರಾಕೆಟ್‍ಗೆ 375 ಕೋಟಿ ಖರ್ಚು, ಚಂದ್ರಯಾನ-2 ಉಪಗ್ರಹದ ಒಟ್ಟು ತೂಕ 3,850 ಕೆಜಿ. ಇದೆ. 3 ಲಕ್ಷದ 82 ಸಾವಿರ ಕಿ.ಮೀ. ಸಾಗಲಿದೆ. ಈ ಉಪಗ್ರಹ ಚಂದ್ರನ ದಕ್ಷಿಣ ಧ್ರುವ ತಲುಪಲಿದೆ.

ಎಲ್ಲವು ಅದ್ದುಕೊಂಡತೆ ಆದರೆ ಈ ಸಾಧನೆ ಮಾಡಿದ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಈ ಸಾಲಿಗೆ ಈಗ ಭಾರತ ಸೇರಲು ತುದಿಗಾಲಿನಲ್ಲಿ ನಿಂತಿದೆ. ಭಾರತದ ಈ ಸಾಧನೆ ಹೊತ್ತಲ್ಲೇ 2024ಕ್ಕೆ ಚಂದ್ರನ ದಕ್ಷಿಣ ಧ್ರುವಕ್ಕೇ ಹೋಗಬೇಕು ಎಂದು ನಾಸಾದ ಗಗನಯಾತ್ರಿಗಳಿಗೆ ಟ್ರಂಪ್ ಹೇಳಿದ್ದಾರೆ.

Leave a Reply

Your email address will not be published. Required fields are marked *