Connect with us

Latest

ಕೋವಿಡ್ ಬಳಿಕ ಉಪಗ್ರಹ ಉಡಾವಣೆ ಯಶಸ್ವಿ- ಇಸ್ರೋಗೆ ಮೋದಿ ಅಭಿನಂದನೆ

Published

on

ಶ್ರೀಹರಿಕೋಟಾ: ಸರಿ ಸುಮಾರು ಒಂದು ವರ್ಷದ ಬಳಿಕ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಪಗ್ರಹ ಉಡಾವಣಾ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪಿಎಸ್‍ಎಲ್‍ವಿ ಸಿ49 ರಾಕೆಟ್ ಮೂಲಕ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿನ ಮೊದಲ ಲಾಂಚ್ ಪ್ಯಾಂಡ್‍ನಿಂದ ಉಪಗ್ರಹಗಳನ್ನು ಶನಿವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭೂಮಿಯ ಹವಾಮಾನ ಚಿತ್ರಣ ಇಒಎಸ್-1 ಉಪ್ರಗಹ ಸೇರಿದಂತೆ ವಿದೇಶದ 9 ಉಪಗ್ರಹಗಳನ್ನು ಹೊತ್ತ ಪಿಎಸ್‍ಎಲ್‍ವಿ ಸಿ49 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಜಿಗಿಯಿತು. ಮಾರ್ಚ್ 23ರ ಲಾಕ್‍ಡೌನ್ ಬಳಿಕ ಇಸ್ರೋ ಮಾಡಿದ ಮೊದಲ ಉಡಾವಣೆ ಇದಾಗಿದೆ.

ಮಧ್ಯಾಹ್ನ 3.02ಕ್ಕೆ ನಿಗದಿಯಾಗಿದ್ದ ಉಡಾವಣೆಯನ್ನು, 10 ನಿಮಿಷಗಳ ಕಾಲ ತಡವಾಗಿ ಅಂದರೆ 3.12ಕ್ಕೆ ಮಾಡಲಾಯಿತು. ಮಿಂಚಿನಿಂದ ರಾಕೆಟ್‍ನಲ್ಲಿ ಅಳವಡಿಸಲಾಗಿದ್ದ ಎಲೆಕ್ಟ್ರಾನಿಕ್ಸ್ ಆನ್‍ಬೊರ್ಡ್ ನಲ್ಲಿ ಹಾನಿಯಾಗಬಹುದಾದ ಸಾಧ್ಯತೆ ಇದ್ದ ಕಾರಣದಿಂದ 10 ನಿಮಿಷ ಉಡಾವಣೆಯನ್ನ ಮುಂದೂಡಲಾಗಿತ್ತು.

ಈ ಕುರಿತು ಟ್ವೀಟ್ ಮಾಡಿ ಇಸ್ರೋಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಸ್‍ಎಲ್‍ವಿ ಸಿ49 ಮಿಷನ್ ಯಶಸ್ವಿಯಾಗಿದ್ದು, ಕೋವಿಡ್ ಸಮಯದಲ್ಲಿ ನಮ್ಮ ವಿಜ್ಞಾನಿಗಳು ಹಲವು ನಿರ್ಬಂಧಗಳನ್ನು ನಿವಾರಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಈ ಮಿಷನ್ ಇಸ್ರೋಗೆ ಬಹಳ ವಿಶೇಷವಾಗಿತ್ತು. ಬಾಹ್ಯಾಕಾಶ ಚಟುವಟಿಕೆಯನು ವರ್ಕ್ ಫ್ರಂ ಹೋಮ್ ಕೆಲಸದಿಂದ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಎಂಜಿನಿಯರ್ ಲ್ಯಾಬ್‍ನಲ್ಲಿ ಹಾಜರಿರಬೇಕು. ಪ್ರತಿಯೊಬ್ಬ ತಂತ್ರಜ್ಞ ಹಾಗೂ ಉದ್ಯೋಗಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಇಂದು ನಡೆದ ಉಡಾವಣೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ವರ್ಕ್‍ಹಾರ್ಸ್ ಎಂದು ಕರೆಯುವ ಪಿಎಸ್‍ಎಲ್‍ವಿಯ 51ನೇ ಉಡಾವಣೆ ಇದಾಗಿದ್ದು, ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ 77ನೇ ಉಡಾವಣಾ ಕಾರ್ಯಾಚರಣೆಯಾಗಿದೆ. ಇದುವರೆಗೂ 33 ರಾಷ್ಟ್ರಗಳ 328ಕ್ಕೂ ಹೆಚ್ಚು ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *