Connect with us

Districts

ಸೌದಿಯಲ್ಲಿ ಉಡುಪಿ ವ್ಯಕ್ತಿಗೆ ಐಎಸ್‍ಎಫ್ ನೆರವು – 21 ವರ್ಷದ ಬಳಿಕ ತವರಿಗೆ

Published

on

Share this

ದಮ್ಮಾಮ್/ಉಡುಪಿ: ಕಳೆದ ಇಪ್ಪತ್ತೊಂದು ವರ್ಷಗಳಿಂದ ಸೌದಿ ಅರೇಬಿಯಾದಿಂದ ತಾಯ್ನಾಡಿಗೆ ಮರಳದೆ ಕುಟುಂಬದಿಂದ ದೂರವಾಗಿದ್ದು ಗಂಭೀರ ಕಾಯಿಲೆ ಪೀಡಿತರಾಗಿದ್ದ 68ರ ಹರೆಯದ ಉಡುಪಿ ತೋನ್ಸೆ ಮೂಲದ ವ್ಯಕ್ತಿಯನ್ನು ತವರಿಗೆ ಮರಳಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ (ಐಎಸ್‍ಎಫ್) ಯಶಸ್ವಿಯಾಗಿದೆ. ಸಂತ್ರಸ್ತ ವ್ಯಕ್ತಿ ಇತ್ತೀಚೆಗೆ ವಂದೇ ಭಾರತ್ ವಿಮಾನದ ಮೂಲಕ ಮಂಗಳೂರು ತಲುಪಿದ್ದಾರೆ.

ಉಡುಪಿ ತೋನ್ಸೆ ಯ ಪ್ರಭಾಕರ್, ಕಳೆದ ನಲ್ವತ್ತು ವರ್ಷಗಳಿಂದ ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು. 2000ನೇ  ಇಸವಿಯಲ್ಲಿ ಕೊನೆಯ ಬಾರಿಗೆ ತಾಯ್ನಾಡಿಗೆ ಹೋಗಿ ಬಂದಿದ್ದರು. ನಂತರ ತವರಿಗೆ ಹಿಂದಿರುಗಿರಲಿಲ್ಲ. ಇತ್ತೀಚೆಗೆ ವಾಟ್ಸಪ್‍ನಲ್ಲಿ ಪ್ರಭಾಕರ್ ರವರು ಚಿಂತಾಜನಕ ಸ್ಥಿತಿಯಲ್ಲಿರುವ ವಿಷಯ ವೈರಲ್ ಆಗಿತ್ತು ಮಾತ್ರವಲ್ಲದೆ ಊರಿನಿಂದ ಎಸ್.ಡಿ.ಪಿ.ಐ. ಪಕ್ಷ ಕೂಡಾ ಐ.ಎಸ್.ಎಫ್ ದಮ್ಮಾಂ ಘಟಕವನ್ನು ಸಂಪರ್ಕಿಸಿ ಸಹಾಯ ನೀಡಲು ಕೋರಿತ್ತು. ಹೊಟ್ಟೆ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಅವರು ರಕ್ತಭೇದಿ ಮಾಡುತ್ತಿದ್ದರು ಮತ್ತು ಚಿಕಿತ್ಸೆಯಿಲ್ಲದೆ ನರಳುತ್ತಿದ್ದರು.

ಮಾಹಿತಿ ಕಲೆ ಹಾಕಿದ ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್ ಘಟಕ ವೆಲ್ಫೇರ್ ವಿಭಾಗದ ಮುಹಮ್ಮದ್ ಅಲಿ ಮೂಳೂರು ರವರ ನೇತೃತ್ವದ ಲ್ಲಿ ಒಂದು ತಂಡ ರಚಿಸಿತು. ಅದರಂತೆ ಇಬ್ರಾಹೀಂ ಕೃಷ್ಣಾಪುರ ಹಾಗೂ ಇಮ್ರಾನ್ ಕಾಟಿಪಳ್ಳ ರವರು ಜೊತೆಗೂಡಿ ದಮ್ಮಾಮ್ ನ ಸೀಕೊದಲ್ಲಿ ಪ್ರಭಾಕರ್ ರವರನ್ನು ಪತ್ತೆಮಾಡಿತ್ತು.  ನೈರ್ಮಲ್ಯ ರಹಿತ ಕೊಠಡಿಯೊಂದರಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಪ್ರಭಾಕರ್  ಪತ್ತೆಯಾಗಿದ್ದರು. ನಾಲ್ಕು ವರ್ಷಗಳಿಂದ ಅವರ ಇಕಾಮಾ ನವೀಕರಣಗೊಂಡಿರಲಿಲ್ಲ. ಈ ಸಂದರ್ಭದಲ್ಲಿ ತಕ್ಷಣವೇ ಐ.ಎಸ್.ಎಫ್ ಅವರನ್ನು ಅಲ್ ಖೋಬಾರ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿ ಪ್ರಾರ್ಥಮಿಕ ಚಿಕಿತ್ಸೆಯ ಏರ್ಪಾಡು ಮಾಡಿತ್ತು ಆದರೆ  ಇಕಾಮ ಮತ್ತು ಆರೋಗ್ಯ ವಿಮೆ ಅವಧಿ ಮುಗಿದ ಕಾರಣ ಅವರನ್ನು ನಂತರ ಕಿಂಗ್ ಫಹದ್ ಯೂನಿವರ್ಸಿಟಿ ಆಸ್ಪತ್ರೆಗೆ ವರ್ಗಾಯಿಸಲು ವೆಲ್ಫೇರ್ ತಂಡ ನಿರ್ಧರಿಸಿತು. ಅಲ್ಲಿ ಸುಮಾರು ಎರಡು ವಾರದ ವರೆಗೆ ಅಚ್ಚುಕಟ್ಟಿನ ಶುಶ್ರೂಷೆ ಗಳನ್ನು ನೀಡಿದ ಆಸ್ಪತ್ರೆ ,ಅವರನ್ನು ಎಲ್ಲಾ ತರದ ಪರೀಕ್ಷೆಗೆ ಒಳಪಡಿಸಿ, ಅವರಿಗೆ ಗಂಭೀರ ಕಾಯಿಲೆ ಇರುವುದು ಅಲ್ಲಿನ ವೈದ್ಯರ ತಂಡ ಪತ್ತೆ ಹಚ್ಚಿತು. ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ಮರಳಿಸುವುದು ಅನಿವಾರ್ಯವಾಗಿತ್ತು.

ಇನ್ನೊಂದು ಕಡೆ ಅವರ ಪ್ರಾಯೋಜಕ ರನ್ನು ಸಂಪರ್ಕಿಸಿದ ತಂಡ, ಅವರ ಪಾಸ್ ಪೋರ್ಟ್ ಅವಧಿ ಕೂಡಾ ಮುಗಿದಿರುವುದನ್ನು ಮನಗಂಡಿತು. ಐ.ಎಸ್. ಎಫ್. ತಕ್ಷಣವೇ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಭಾಕರ್ ಮಾಹಿತಿಯನ್ನು ಸ್ಥೂಲವಾಗಿ ವಿವರಿಸಿತು ಮತ್ತು ಊರಿಗೆ ತೆರಳಲು ಔಪಚಾರಿಕವಾಗಿ ಬೇಕಾದ ದಾಖಲೆ ಪತ್ರಗಳನ್ನು ಕೋರಿತ್ತು. ಅದರಂತೆ ತಕ್ಷಣ ಸ್ಪಂದಿಸಿದ ಭಾರತೀಯ ರಾಯಭಾರಿ ಕಚೇರಿ, ಔಪಚಾರಿಕವಾಗಿ ದೃಡೀಕರಣ ಪತ್ರವನ್ನು ಹಾಗೂ ಎಮರ್ಜೆನ್ಸಿ ಸರ್ಟಿಫಿಕೇಟ್ ಬಿಡುಗಡೆಗೊಳಿಸಿ ಊರಿಗೆ ಮರಳಲು ಅನುಕೂಲ ಮಾಡಿಕೊಟ್ಟಿತು. ನಿರಂತರ ಸೌದಿ ಕಾರ್ಮಿಕ ಸಚಿವಾಲಯದ ಸಂಪರ್ಕದಲ್ಲಿದ್ದ ವೆಲ್ಫೇರ್ ತಂಡ ಅವರ ಫೈನಲ್ ಎಕ್ಸಿಟ್ ಗೆ ಬೇಕಾದ ಏರ್ಪಾಟುಗಳನ್ನೂ ಕೂಡಾ ಮಾಡಿ ಮುಗಿಸಿತು.

ಪ್ರಭಾಕರ್ ತವರು ತಲುಪಿದ ಬಳಿಕ ವರ ಚಿಕಿತ್ಸೆಗೆ ಸಂಬಂಧಿಸಿದ ಏರ್ಪಾಟುಗಳನ್ನು ಮಾಡುವಂತೆ ಐ.ಎಸ್.ಎಫ್ ಸಮಿತಿ ಊರಿನ ಎಸ್.ಡಿ.ಪಿ.ಐ ಪಕ್ಷವನ್ನು ಕೋರಿದ್ದು ಪಕ್ಷದ ಕಾರ್ಯಕರ್ತರು ಅವರನ್ನು ವಿಮಾನ ನಿಲ್ದಾಣದಿಂದ ಆಂಬ್ಯುಲೆನ್ಸ್ ಮೂಲಕ ಎಂ.ಐ.ಒ ಆಸ್ಪತ್ರೆಗೆ ಕರೆದೊಯ್ದಿದ್ದು, ಮುಂದಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಇದೊಂದು ಕಠಿಣ ಹಾಗೂ ತುರ್ತು ಸೇವೆಯ ಕೆಲಸವಾಗಿದ್ದು, ನಿರಂತರವಾಗಿ ಎರಡು ವಾರಗಳ ಕಾಲ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ವೆಲ್ಫೇರ್ ಟೀಂ ಗೆ ಐ.ಎಸ್. ಎಫ್. ಅಭಿನಂದನೆ ಸಲ್ಲಿಸಿದೆ. ಭಾರತೀಯ ರಾಯಭಾರಿ ಕಚೇರಿ ಯ ತಕ್ಷಣದ ಸ್ಪಂದನೆ ಹಾಗೂ ಟಿಕೆಟ್ ಹಾಗೂ ಇನ್ನಿತರ ಕೆಲಸಗಳಿಗೆ ಹಣಕಾಸಿನ ನೆರವು ನೀಡಿದ ಎಂಎಎಸ್‍ಎ ಸಂಘಟನೆಯ ಅಧ್ಯಕ್ಷರಾದ ಸತೀಶ್ ಬಜಾಲ್, ಐಎಸ್‍ಎಫ್ ಹಿತೈಷಿ, ಉದಾರಿ ಜಾಯ್ ಫೆನಾರ್ಂಡಿಸ್ ಹಾಗೂ ದಮ್ಮಾಮ್ ಹೆಲ್ತ್ ಕ್ಲಿನಿಕ್ ನ ವೈದ್ಯ ಡಾ.ಮುಹಮ್ಮದ್ ವಾಸೀಂ ಭಟ್ಕಳ್ ರವರನ್ನೂ ಕೂಡಾ ಐಎಸ್‍ಎಫ್ ಈ ಸಂದರ್ಭದಲ್ಲಿ ಅಭಿನಂದಿಸಿ ಮುಂದೆಯೂ ಎಲ್ಲರ ಸಹಕಾರ ಇದ್ದರೆ ಖಂಡಿತ ಎಂತಹ ಕಠಿಣ ಪರಿಸ್ಥಿತಿ ಬಂದರೂ ನಿಭಾಯಿಸಲು ಸಾಧ್ಯ ಎಂದು ಇಂಡಿಯನ್ ಸೋಷಿಯಲ್ ಫೋರಂ ತಿಳಿಸಿದೆ.

Click to comment

Leave a Reply

Your email address will not be published. Required fields are marked *

Advertisement