Sunday, 17th November 2019

Recent News

ಸ್ಟಾರ್‌ಗಳು ದೇವರಲ್ಲ, ಅಭಿಮಾನಿಗಳು ಭಕ್ತರಲ್ಲ – ಹುಟ್ಟುಹಬ್ಬದಂದೇ ಅಣ್ತಮ್ಮನ ಹೃದಯ ಛಿದ್ರ

– ನಮ್ಮಂತೆ ಸಾಮಾನ್ಯ ಮನುಷ್ಯರೇ ಈ ಹೀರೋಗಳೆಲ್ಲ
– ಹುಟ್ಟುಹಬ್ಬದ ದಿನವೇ ಹುಚ್ಚು ಅಭಿಮಾನಿ ಆತ್ಮಹತ್ಯೆ

ಬೆಂಗಳೂರು: ಅಭಿಮಾನದ ಹೆಸರಲ್ಲಿ ಹುಚ್ಚು ಅಭಿಮಾನ, ಹುಟ್ಟುಹಬ್ಬದ ಹೆಸರಲ್ಲಿ ಆತ್ಮಹತ್ಯೆ, ಪ್ರೀತಿಯ ಹೆಸರಲ್ಲಿ ತಿಕ್ಕಲುತನ. ಖಂಡಿತ ಇದನ್ನು ಯಾರೂ ಒಪ್ಪಲು ಸಾಧ್ಯ ಇಲ್ಲ. ಇದಕ್ಕೆ ಪ್ರಮುಖ ತಾಜಾ ಉದಾಹರಣೆ ನಟ ಯಶ್ ಹುಟ್ಟುಹಬ್ಬದಂದು ಹರೆಯದ ಹುಡುಗನೊಬ್ಬ ಬೆಂಕಿ ಹಚ್ಚಿಕೊಂಡು ಹೆಣವಾಗಿದ್ದಾನೆ. ಆತನ ಹಡೆದವರು ಮಾತ್ರ ಎದೆ ಬಡಿದುಕೊಂಡು ಅಳುತ್ತಿದ್ದಾರೆ. ಸ್ಟಾರ್ ಗಳು ಮತ್ತು ಅಭಿಮಾನಿಗಳನ್ನು ಎಚ್ಚರಿಸಲು ಇದು ಬಹಳ ಮುಖ್ಯ ಸಮಯವಾಗಿದೆ.

ಅಭಿಮಾನಿಯ ಹುಚ್ಚಾಟ ಕ್ಷಮಿಸಲು ಸಾಧ್ಯವಿಲ್ಲ:
ಒಬ್ಬೊಬ್ಬ ವ್ಯಕ್ತಿಗೆ ಒಬ್ಬೊಬ್ಬ ಸ್ಟಾರ್ ಇಷ್ಟವಾಗುತ್ತಾರೆ. ನಟನ ಯಾವುದೋ ಸಿನಿಮ್ಯಾಟಿಕ್ ಡೈಲಾಗು, ಮ್ಯಾನರಿಸಂ, ಲುಕ್, ಮನಸ್ಸಿಗೆ ನಾಟಿರುತ್ತದೆ. ಅದಕ್ಕೆ ಆ ಸ್ಟಾರ್ ಗೆ ಮನಸಲ್ಲಿ ಜಾಗ ಕೊಡುತ್ತಾರೆ. ಆಯಾ ನಟರ ಸಿನಿಮಾ ರಿಲೀಸ್ ಆದಾಗ ಹಬ್ಬ ಮಾಡುತ್ತಾರೆ, ಹುಟ್ಟುಹಬ್ಬಕ್ಕೆ ಪೈಸೆ ಪೈಸೆ ಕೂಡಿಸಿ ಕೇಕ್ ಕತ್ತರಿಸುತ್ತಾರೆ. ಅನ್ನ ಸಂತರ್ಪಣೆ ಮಾಡುತ್ತಾರೆ. ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಾರೆ. ಬಡ ಬಗ್ಗರಿಗೆ ಕೈಲಾದಷ್ಟು ಸಹಾಯ ಮಾಡುತ್ತಾರೆ. ಇದೆಲ್ಲ ನಿಜಕ್ಕೂ ಆ ಸ್ಟಾರ್ಸ್ ಅಭಿಮಾನಿಗಳು ಮಾಡುವ ದೇವರಂಥ ಕೆಲಸ. ಆದರೆ ಯಶ್ ಹುಟ್ಟುಹಬ್ಬದಂದು ಉನ್ಮಾದಕ್ಕೆ ಸಿಕ್ಕು ಬೆಂಕಿ ಹಚ್ಚಿಕೊಂಡು ಹೆಣವಾದ ಘಟನೆಯನ್ನ ಮಾತ್ರ ಯಾರೂ ಕ್ಷಮಿಸಲು ಸಾಧ್ಯ ಇಲ್ಲ.

ಹುಟ್ಟುಹಬ್ಬ ಆಚರಿಸಲ್ಲ ಎಂದಿದ್ರು ರಾಕಿ:
ಕನ್ನಡ ಚಿತ್ರ ರಂಗ ದಿಗ್ಗಜ ನಟ ಅಂಬರೀಶ್ ನಿಧನದಿಂದ ಯಶ್ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲ್ಲ ಎಂದು ಮೊದಲೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದಲ್ಲದೆ ಐಟಿ ರೇಡ್ ನಿಂದ ಕೂಡ ಯಶ್ ಸಮಸ್ಯೆ ಎದುರಿಸಿದ್ದರು. ಆದರೆ ಅಭಿಮಾನಿಗಳು ಮಾತ್ರ ನಗರದ ಕತ್ರಿಗುಪ್ಪೆಯ ಯಶ್ ಮನೆ ಮುಂದೆ ರಾತ್ರಿಯಿಂದಲೇ ಜಮಾಯಿಸಿದ್ದರು. ಆ ವೇಳೆ ಯಶ್ ಬೇರೊಂದು ಕಡೆ ಹೋಗಿದ್ದರು. ಬೆಳಗಾದರೂ ಜನರು ಬರುವುದು ಕಮ್ಮಿಯಾಗುತ್ತಿರಲಿಲ್ಲ. ಅದರಲ್ಲೇ ಇದ್ದ ಹುಡುಗ ರವಿ ಕಿಂಚಿತ್ತೂ ಸಾವಿನ ಅಂಜಿಕೆ ಇಲ್ಲದೆ, ಯಾವುದೊ ಹಠಕ್ಕೆ ಬಿದ್ದಂತೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಇಟ್ಟುಕೊಂಡ.

ಯಶ್ ಮನೆಯಲ್ಲಿ ಇಲ್ಲ ಎಂದು ತಾಯಿ ಪುಷ್ಪ ಹೇಳಿದರೂ, ಅಣ್ಣನ ಮುಖ ನೋಡದೇ ಹೋಗಲ್ಲ ಎಂದು ಕಣ್ಣು ಕೆಂಪಗೆ ಮಾಡಿಕೊಂಡ ಆತ, ಹಲ್ಲು ಕಡಿಯುತ್ತಿದ್ದ. ಆತನ ಮನಸು ಅಷ್ಟಕ್ಕೇ ಸಿಟ್ಟಾಗಿತ್ತು. ಬೆಂಕಿ ಹಚ್ಚಿಕೊಂಡರೆ ಯಶ್ ಮುಖ ನೋಡುತ್ತಾರೆ ಎನ್ನುವ ವಿಲಕ್ಷಣ ಬಯಕೆ ಮೂಡಿತು. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ.

ಹುಟ್ಟುಹಬ್ಬದಂದೇ ಅಣ್ತಮ್ಮನ ಹೃದಯ ಛಿದ್ರ:
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ನಟನ ಹುಟ್ಟುಹಬ್ಬದಂದು ಅಭಿಮಾನಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇತಿಹಾಸದ ಪುಟದಲ್ಲಿ ಕರಾಳ ದಿನವಾಗಿ ದಾಖಲಾಗಿದೆ. ಈ ನಡುವೆ ವಿಕ್ಟೋರಿಯಾ ಆಸ್ಪತ್ರೆಗೆ ರವಿಯನ್ನು ದಾಖಲು ಮಾಡಿಲಾಗಿತ್ತು. ಯಶ್ ಹೋಗಿದ್ದ ಯಶ್‍ಗೆ `ಹ್ಯಾಪಿ ಬರ್ತ್ ಡೇ…ಅಣ್ಣಾ…’ ಎಂದು ಕರಕಲಾದ ಕೈಗಳಿಂದ ವಿಶ್ ಮಾಡಿದ್ದ ರವಿ. ಈ ವೇಳೆ ಯಶ್ ಸಮಾಧಾನ ಮಾಡಿದರು. ಪಕ್ಕದಲ್ಲಿದ್ದ ಅಪ್ಪ ಅಮ್ಮನಿಗೆ ಧೈರ್ಯ ತುಂಬಿದರು. ಅದಕ್ಕಿಂತ ಇನ್ನೇನು ಮಾಡಲು ಯಶ್‍ಗೆ ಸಾಧ್ಯವಿರಲಿಲ್ಲ. ಆಗ ಅವರಿಂದ ಹೊರಟ ಮಾತುಗಳು ಒಬ್ಬ ಸ್ಟಾರ್ ಗಿಂತ ಹೆಚ್ಚಾಗಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯ ಅನಿಸಿಕೆಯಾಗಿತ್ತು.

ಯಶ್ ಈ ಸಂದರ್ಭದಲ್ಲಿ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಒಂದು ಸಾವು ಎಷ್ಟೇ ಭೀಕರ, ಅಕಸ್ಮಿಕವಾಗಿದ್ದರೂ ಜನರ ಪ್ರತಿಕ್ರಿಯೆ ಇಷ್ಟೇ ಆಗಿರುತ್ತದೆ. ನಾಲ್ಕು ದಿನ ಅಳುವಲ್ಲಿ, ನಾಲ್ಕು ತಿಂಗಳು ಅಳಬಹುದು. ಅದಾದ ನಂತರ ಜೀವನದ ಈ ಭೂಮಿ ಮೇಲಿನ ನಾಟಕ ಆಡಲೇಬೇಕು. ಸದ್ಯ ಯಶ್ ಕೆಲವು ಲಕ್ಷ ಹಣವನ್ನು ಹುಡುಗನ ಕುಟುಂಬಕ್ಕೆ ಕೊಡಬಹುದು. ಅದಕ್ಕಿಂತ ಅಗುಳಿನಷ್ಟೂ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ.

ಸ್ಟಾರ್ ಗಳನ್ನು ದೇವರೆನ್ನುವುದು, ಅಭಿಮಾನಿಗಳನ್ನು ಭಕ್ತರಿಗೆ ಹೋಲಿಸುವುದು ಮೊದಲು ನಿಲ್ಲಬೇಕು. ಸ್ಟಾರ್ ಗಳ ಹುಟ್ಟುಹಬ್ಬದ ಆಚರಣೆಯಿಂದ ಈ ಸಮಾಜಕ್ಕೆ ಸಿಗುವ ಲಾಭವೂ ಅಷ್ಟರಲ್ಲೇ ಇದೆ. ಅಭಿಮಾನದ ಹೆಸರಲ್ಲಿ ಅಂಧಭಿಮಾನ ನಡೆಯಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಸ್ಟಾರ್ ಗಳಿಗೆ ಹೂವಿನ ಹಾರ ಹಾಕುವ ಅಭಿಮಾನಿಗಳು ಅದೇ ಹಣದಿಂದ ಹೆತ್ತ ಅಪ್ಪ ಅಮ್ಮನಿಗೆ ಒಂದು ಹಿಡಿ ಅನ್ನ ತಿನ್ನಿಸಬೇಕು.

ಕುಟುಂಬಕ್ಕೆ ಆಧಾರವಾಗಿದ್ದ ಹುಡುಗ:
ಅಂದಹಾಗೇ 23 ವರ್ಷದ ರವಿ ಅಪ್ಪ ಅಮ್ಮನ ಎರಡನೇ ಮಗ. ದೊಡ್ಡ ಮಗ ಮದುವೆಯಾಗಿ ದೂರವಾಗಿದ್ದು, ಅಪ್ಪನ ಕಾಲು ಊನ. ಇತ್ತ ಅಮ್ಮ ಆಸ್ಪತ್ರೆ ಮತ್ತು ಕೆಲವು ಮನೆಗಳಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಾರೆ. ಇನ್ನು ರವಿ ಗಾರೆ ಕೆಲಸ ಮಾಡುತ್ತ, ರಾತ್ರಿ ಹೊತ್ತು ಪೋಸ್ಟರ್‍ಗಳನ್ನು ಗೋಡೆಗಳಿಗೆ ಅಂಟಿಸುತ್ತಿದ್ದ. ರವಿಯ ಆದಾಯದ ಮೇಲೆ ಇಡೀ ಕುಟುಂಬ ಉಸಿರಾಡುತಿತ್ತು. ಆದರೆ ಈ ಉಸಿರನ್ನು ಪೆಟ್ರೋಲ್, ಒಂದೇ ಒಂದು ಕಡ್ಡಿ ಎಲ್ಲವನ್ನೂ ಸುಟ್ಟು ಬೂದಿ ಮಾಡಿದೆ. ಅಪ್ಪ ಅಮ್ಮನ ನಿಲ್ಲದ ಕಣ್ಣೀರು ಕಂಡ ಯಶ್ ಎದೆಯಲ್ಲಿದ್ದ ಕೋಪವನ್ನು ಅದುಮಿಟ್ಟುಕೊಂಡು ಸತ್ಯದ ಮಾತನಾಡಿದ್ದಾರೆ.

ಅಭಿಮಾನಿಯ ಭೇಟಿ ಬಳಿಕ ಯಶ್ ಆಡಿದ ಮಾತು ಕಠೋರವಾದರೂ ಸತ್ಯ. ಇದು ಕೇವಲ ಯಶ್ ಅನಿಸಿಕೆ ಮಾತ್ರವಲ್ಲ. ಎಲ್ಲಾ ಸ್ಟಾರ್ ಗಳು ಇದನ್ನೇ ಹೇಳುತ್ತಾರೆ. ಅಂಥ ಘಟನೆ ನಡೆದಾಗ ಕೈಲಾದಷ್ಟು ಸಹಾಯ ಮಾಡುತ್ತಾರೆ. ಆದರೆ ಅದರಿಂದ ಹೋದ ಜೀವ ಬರುತ್ತದಾ? ಆ ವ್ಯಕ್ತಿಯನ್ನೇ ನಂಬಿಕೊಂಡ ಜೀವಗಳಿಗೆ ಶಾಶ್ವತ ನೆರವು ದೊರಕುತ್ತದಾ? ಇದೆಲ್ಲಾ ಗೊತ್ತಿದ್ದರೂ ಮತ್ತೆ ಏಕೆ ಅಭಿಮಾನದ ಹೆಸರಲ್ಲಿ ಜೀವ ಬೆದರಿಕೆಯಂಥ ಘಟನೆಗಳು ನಡೆಯುತ್ತವೆ.

ಎಲ್ಲರಿಗೂ ಎಲ್ಲಾ ಕ್ಷೇತ್ರದಲ್ಲೂ ಅವರವರಿಗೆ ಅಭಿಮಾನಿಗಳು ಇರುತ್ತಾರೆ. ರಾಜಕಾರಣಿ ಮತ್ತು ಸಿನಿಮಾ ಮಂದಿಗೆ ಒಂದು ಹಿಡಿ ಹೆಚ್ಚು. ಆದರೆ ಅದೇ ಅಭಿಮಾನ ಕೆಲವೊಮ್ಮೆ ಇಂಥ ಆತ್ಮಹತ್ಯೆಯಂಥ ಘಟನೆಗೆ ಕಾರಣವಾಗುತ್ತವೆ. ಇದನ್ನು ಹುಚ್ಚು ಅಭಿಮಾನ ಎನ್ನುತ್ತಾರೆ. ತನ್ನನ್ನೇ ತಾನು ಕೊಂದುಕೊಂಡಾತ, ಅದೇ ಜೋಶ್‍ನಲ್ಲಿ ಇನ್ನೊಬ್ಬನನ್ನು ಹತ್ಯೆ ಮಾಡಲಾರನೇ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್‍ಟಿಆರ್ ಅಭಿಮಾನಿಗಳು ಇದೇ ರೀತಿ ಇನ್ನೊಬ್ಬ ಸ್ಟಾರ್ ಅಭಿಮಾನಿಯನ್ನು ಕೊಂದಿದ್ದರು. ಅದು ಕರ್ನಾಟಕದ ಕೋಲಾರದ ಸಮೀಪ. ಅದೇ ಪರಮ ದುರಭಿಮಾನ ಅಲ್ವಾ?

ತಮಿಳಿನ ಸೂಪರ್ ಸ್ಟಾರ್ ಥಲಾ ಅಜಿತ್ ಕೆಲವು ವರ್ಷಗಳ ಹಿಂದೆ ತಮ್ಮ ಎಲ್ಲಾ ಅಭಿಮಾನಿ ಸಂಘಗಳನ್ನು ಬ್ಯಾನ್ ಮಾಡಿಬಿಟ್ಟರು. ಅಭಿಮಾನಿಗಳು ಬಾಯಿ ಬಡಕೊಂಡರೂ, ನೆಲದಮೇಲೆ ಬಿದ್ದು ಹೊರಳಾಡಿದರೂ ಅಜಿತ್ ಮಿಸುಕಾಡಲಿಲ್ಲ. ಆದರೆ ಅವರು ನಟಿಸಿದ ಪ್ರತಿಯೊಂದು ಸಿನಿಮಾ ನೂರು ಕೋಟಿ ಕ್ಲಬ್ ಸೇರದೇ ಹೋಗಿಲ್ಲ. ಅದು ನಿಜವಾದ ಅಭಿಮಾನ.

ಕನ್ನಡದ ಚಿತ್ರರಂಗದ ಶಿವಣ್ಣ, ಉಪೇಂದ್ರ, ದರ್ಶನ್, ಸುದೀಪ್, ಪುನೀತ್, ಯಶ್, ವಿಜಯ್, ಗಣೇಶ್, ಮುರುಳಿ, ಧ್ರುವಸರ್ಜಾ, ನೆನಪಿರಲಿ ಪ್ರೇಮ್ ಇವರೆಲ್ಲ ತಲಾ ಒಂದೊಂದು ಸ್ಟಾರ್ ಪಟ್ಟ ಹೊತ್ತುಕೊಂಡು ಮೆರವಣಿಗೆ ಹೊರಟಿದ್ದಾರೆ. ಲಕ್ಷ ಲಕ್ಷ ಅಭಿಮಾನಿಗಳು ಮತ್ತು ಸಂಘಗಳನ್ನು ಹೊಂದಿದ್ದಾರೆ. ತಮಿಳಿನ ಥಲಾ ಅಜಿತ್ ಮಾಡಿದಂತೆ ಇವರೂ ಒಂದು ಗಟ್ಟಿ ನಿರ್ಧಾರಕ್ಕೆ ಬರಲಿ. ಆಗ ಏನಾದ್ರು ಭೂಕಂಪ, ಪ್ರಳಯ ಆಗುತ್ತೆ ಎಂದು ಯಾರಾದರೂ ತಿಳಿದರೆ ಅದು ಜೋಕ್ ಆಫ್ ಗಾಂಧಿನಗರ ಎನಿಸುತ್ತದೆ. ಅದಾದ ಮೇಲಾದರೂ ಇಂಥ ಅಮಾಯಕ ರವಿಯಂಥವರ ಸಾವು ತಪ್ಪುತ್ತದೆ.

ಸ್ಟಾರ್ ಗಳ ಅಭಿಮಾನಕ್ಕೆ ಜೋತು ಬಿದ್ದು ಸತ್ತರೆ, ಅದರಿಂದ ನಷ್ಟ ಆಯಾ ಸ್ಟಾರ್ ಗಳಿಗಲ್ಲ. ನಿಮ್ಮನ್ನು ಹೆತ್ತ ಅಪ್ಪ ಅಮ್ಮ, ಕಟ್ಟಿಕೊಂಡ ಹೆಂಡತಿ ಮಕ್ಕಳಿಗೆ. ಅಂಥ ಕುಟುಂಬದ ಪ್ರತಿ ದೇಹ ನಿತ್ಯ ಅಕ್ಕಿಯನ್ನು ಬಿಸಿ ನೀರಿನಲ್ಲಿ ಬೇಯಿಸುವುದಿಲ್ಲ. ಅವರ ಒಂದೊಂದು ಹನಿ ಕಣ್ಣೀರಿನಲ್ಲೇ ಅನ್ನ ಬೇಯುತ್ತದೆ. ಅಭಿಮಾನಿಗಳೇ ಈಗ ನೀವೇ ಯೋಚಿಸಿ.
– ಮಹೇಶ್ ದೇವಶೆಟ್ಟಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *