Sunday, 25th August 2019

Recent News

ಮೈತ್ರಿ ಸರ್ಕಾರದಲ್ಲಿನ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣವೇ?

ಬೆಂಗಳೂರು: ಮೈತ್ರಿ ಸರ್ಕಾರ ಗೊಂದಲದ ಗೂಡಾಗಲು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣವಾದರೇ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದಲ್ಲಿ ನಾನು ಹೇಳಿದ್ದೆ ನಡೆಯಬೇಕು ಎನ್ನುವ ಅಹಂ ವರ್ತನೆಯೇ ಇವತ್ತಿನ ಈ ಎಲ್ಲ ಹೈಡ್ರಾಮಕ್ಕೆ ಪ್ರಮುಖ ಕಾರಣವಂತೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ಬಂಡಾಯದ ಬೆಂಕಿ ಏಳುತ್ತಿರುವಾಗಲೇ ಶಮನ ಮಾಡಬಹುದಿತ್ತು. ಹಿರಿಯರಾದ ಕಾರಣ ಅವರ ಮಾತನ್ನು ಶಾಸಕರು ಕೇಳುತ್ತಿದ್ದರು. ಆದರೆ ಅವರು ಸಂಪುಟ ವಿಸ್ತರಣೆ ಸಮಯದಲ್ಲಿ ನಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಬಂಡಾಯದ ಬೆಂಕಿ ಈಗ ಜ್ವಾಲೆಯಾಗಿ ವ್ಯಾಪಿಸತೊಡಗಿದೆ ಎನ್ನುವ ವಿಚಾರವನ್ನು ಕಾಂಗ್ರೆಸ್ ಶಾಸಕರು ತಮ್ಮ ಆಪ್ತರ ಜೊತೆ ಹೇಳಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು ಯಾಕೆ: ಕಾರಣ ಕೊಟ್ಟ ಪಕ್ಷೇತರರು

ಮಾಜಿ ಸಿಎಂ ಮೇಲಿರೋ ಆರೋಪಗಳೇನು?:
ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಕೈಬಿಟ್ಟು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ದೊಡ್ಡ ತಪ್ಪು. ಈ ಬೆಳವಣಿಗೆಯಿಂದ ಇಬ್ಬರು ಪಕ್ಷೇತರ ಶಾಸಕರ ಬೆಂಬಲವನ್ನು ಮೈತ್ರಿ ಸರ್ಕಾರ ಕಳೆದುಕೊಂಡಿತು. ಇತ್ತ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಅವರಿಂದ ಸಚಿವ ಸ್ಥಾನ ಪಡೆದು, ಅವರ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ಕೊಟ್ಟಿದ್ದು ಮೈತ್ರಿಗೆ ಬಿದ್ದ ಮತ್ತೊಂದು ಹೊಡೆತ.

ಬೆಳಗಾವಿಯಲ್ಲಿ ಕೈತಪ್ಪಿದ್ದನ್ನು ಬಳ್ಳಾರಿಯಲ್ಲಿ ಸರಿಪಡಿಸಿ, ರಮೇಶ್ ಜಾರಕಿಹೊಳಿ ಅವರ ಆಪ್ತ ಶಾಸಕ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದ್ದರೆ ಸ್ವಲ್ಪ ಮಟ್ಟಿಗೆ ಭಿನಮತವನ್ನು ಶಮನ ಮಾಡಬಹುದಾಗಿತ್ತು. ಆದರೆ ಸಿದ್ದರಾಮಯ್ಯನವರು ತನ್ನ ಆಪ್ತ ಪರಮೇಶ್ವರ್ ನಾಯ್ಕ್ ಗೆ ಸಚಿವ ಸ್ಥಾನ ನೀಡಿದ್ದು ಉಳಿದವರ ಕಣ್ಣು ಕೆಂಪಗೆ ಮಾಡಿತು. ಇದನ್ನೂ ಓದಿ: ದೋಸ್ತಿ ಸರ್ಕಾರ ಉರುಳುತ್ತಾ? ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಏನೆಲ್ಲ ‘ಮ್ಯಾಜಿಕ್’ ನಡೆಯಬೇಕು?

ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿಯನ್ನು ಲೋಕಸಭಾ ಚುನಾವಣೆಯ ನಂತರ ಮಾಡೋಣ. ಈಗ ಈ ಪ್ರಕ್ರಿಯೆ ಮಾಡಿದರೆ ಶಾಸಕರ ಅಸಮಾಧಾನ ಮತ್ತಷ್ಟು ಜಾಸ್ತಿಯಾಗಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ಮುಖಂಡರು ನನ್ನ ಮಾತನ್ನು ಪುರಸ್ಕರಿಸಲಿಲ್ಲ. ಪಟ್ಟು ಹಿಡಿದು ನೇಮಕಾತಿ ಮಾಡಿದ್ದಕ್ಕೆ ಹೀಗಾಯ್ತು ನೋಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮುಂದೆಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ

ಕುಮಾರಸ್ವಾಮಿ ಆರೋಪಗಳಿಗೆ, ಕಾಲ ಮಿಂಚಿಲ್ಲ, ಸರ್ಕಾರ ಬೀಳಲ್ಲ, ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಅಂತ ಹೇಳಿ ಸಿಎಂಗೆ ವೇಣುಗೋಪಾಲ್ ಅಭಯ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *