Connect with us

Davanagere

ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರಂಜಿಯಂತೆ ಚಿಮ್ಮುತ್ತಿರೋ ನೀರು

Published

on

ದಾವಣಗೆರೆ: ಹರಿಹರ-ದಾವಣಗೆರೆ ಮಾರ್ಗ ಮಧ್ಯೆ 22 ಕೆರೆ ಏತ ನೀರಾವರಿ ಯೋಜನೆ ಪೈಪ್‍ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಪೈಪ್‍ಲೈನ್ ಒಡೆದಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗಲೇ ಪೈಪ್‍ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿದೆ.

ಏತ ನೀರಾವರಿ ಯೋಜನೆ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಇದೇ ಜೂನ್ 22 ರಂದು ಈ ಯೋಜನೆ ಆರಂಭವಾಗಿತ್ತು. ಆದರೆ ನಾಲ್ಕು ದಿನಗಳಲ್ಲಿ ಪೈಪ್ ಲೈನ್ ಹಾಳಾಗಿದೆ. ಈ ಮೂಲಕ ಹತ್ತು ವರ್ಷದ ಯೋಜನೆಗೆ ವಿಘ್ನಗಳು ತಪ್ಪದಂತಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಆ ರಸ್ತೆಯಲ್ಲಿ ಹೋಗುತ್ತಿರುವ ಸವಾರರು ನೀರು ಚಿಮ್ಮುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ರಸ್ತೆಯ ಪಕ್ಕದಲ್ಲಿಯೇ ನೀರು ಕಾರಂಜಿಯಂತೆ ಚಿಮ್ಮುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.