Connect with us

International

ಟ್ರಂಪ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಿದ ಇರಾನ್‌

Published

on

ಟೆಹರಾನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇರಾನ್‌ ಅರೆಸ್ಟ್‌ ವಾರೆಂಟ್‌ ಹೊರಡಿಸಿದ್ದು ಇಂಟರ್‌ಪೋಲ್‌ ಬಳಿ ಸಹಾಯ ಮಾಡುವಂತೆ ಮನವಿ ಮಾಡಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ ಸೇನೆ ಈ ವರ್ಷದ ಜನವರಿ 3 ರಂದು ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಸೇರಿದಂತೆ 30 ಮಂದಿ ವಿರುದ್ಧ ಅರೆಸ್ಟ್‌ ವಾರಂಟ್‌ ಹೊರಡಿಸಿದೆ.

ಇರಾನ್‌ ಸರ್ಕಾರ ಟ್ರಂಪ್‌ ಮತ್ತು 30 ಮಂದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಇಂಟರ್‌ಪೋಲ್‌ ಬಳಿ ಮನವಿ ಮಾಡಿಕೊಂಡಿದೆ. ಫ್ರಾನ್ಸಿನ ಲಿಯಾನ್‌ನಲ್ಲಿರುವ ಇಂಟರ್‌ಪೋಲ್‌ ಇಲ್ಲಿಯವರೆಗೆ ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರೋಪಿಯನ್ನು ಬಂಧಿಸಲು ಅಥವಾ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಗಡೀಪಾರು ಮಾಡಲು ಸರ್ಕಾರಗಳು ಇಂಟರ್‌ಪೋಲ್‌ ಬಳಿ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಮನವಿ ಮಾಡುತ್ತವೆ. ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾದರೆ ಆರೋಪಿಯನ್ನು ಬಂಧಿಸಿ ಕರೆ ತರಲು ದೇಶಗಳಿಗೆ ಸಹಾಯವಾಗುತ್ತದೆ.

ಸಾಮಾನ್ಯವಾಗಿ ದೇಶಗಳಿಂದ ಮನವಿ ಬಂದ ಬಳಿಕ ಇಂಟರ್‌ಪೋಲ್‌(ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಪೊಲೀಸ್‌ ಸಂಘಟನೆ) ತನ್ನ ಸಮಿತಿಯ ಬಳಿ ಚರ್ಚೆ ನಡೆಸಿ ನೋಟಿಸ್‌ ನೀಡಬೇಕೇ? ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸುತ್ತದೆ. ರಾಜಕೀಯ ಉದ್ದೇಶಕ್ಕಾಗಿ ಅಥವಾ ತನ್ನ ಮಾರ್ಗದರ್ಶಿ ನಿಯಮದ ಉಲ್ಲಂಘನೆಯಾಗಿದ್ದಲ್ಲಿ ಇಂಟರ್‌ಪೋಲ್‌ ಸಾಮಾನ್ಯವಾಗಿ ಮನವಿಯನ್ನು ತಿರಸ್ಕರಿಸಿತ್ತದೆ.

ವೈಮಾನಿಕ ದಾಳಿಯ ಮೂಲಕ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೇಮಾನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ವಿಮಾನ ನಿಲ್ದಾಣಕ್ಕೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೇಮಾನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು. ಇದನ್ನೂ ಓದಿ: ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು, ಉಗ್ರರಿಗೆ ಸಹಕಾರ ನೀಡುತ್ತಿದ್ದರು. ಈ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಟ್ರಂಪ್‌ ಏರ್‌ಸ್ಟ್ರೈಕ್‌ ಸಮರ್ಥಿಸಿಕೊಂಡಿದ್ದರು.

ಸುಲೇಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ, “ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು” ಎಂದು ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು. ಡೊನಾಲ್ಡ್ ಟ್ರಂಪ್ ಅವರ ಹತ್ಯೆಗಾಗಿ ಇರಾನ್ ಬಹುಮಾನವನ್ನು ಈಗಾಗಲೇ ಘೋಷಿಸಿದೆ. ಇರಾನ್‍ನಲ್ಲಿ 8 ಕೋಟಿ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಿದೆ.