Connect with us

Cricket

ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

Published

on

ನವದೆಹಲಿ: ಐಪಿಎಲ್ ಎರಡನೇ ದಿನವಾದ ಇಂದು ಸಂಡೇ ಧಮಾಕದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳು ಮುಖಾಮುಖಿಯಾಗಲಿವೆ.

ಎರಡು ತಂಡದಲ್ಲಿ ಯುವ ಆಟಗಾರರು ಮತ್ತು ಯುವ ನಾಯಕರು ಇಂದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಪಂಜಾಬ್ ಮತ್ತು ಡೆಲ್ಲಿ ಎರಡು ತಂಡದಲ್ಲಿ ಒಳ್ಳೆಯ ವಿದೇಶಿ ಆಟಗಾರಿದ್ದು, ಇಂದು ರನ್ ಮಳೆಯೇ ಹರಿಯುವ ಸಾಧ್ಯತೆ ಇದೆ. ಎರಡು ತಂಡಗಳ ಬಲಾಬಲವನ್ನು ನೋಡುವುದಾದರೆ ಉಭಯ ತಂಡಗಳಲ್ಲಿ ಸರಿಸಮಾನ ಆಟಗಾರರು ಇದ್ದಾರೆ.

ರಾಹುಲ್ ವರ್ಸಸ್ ಐಯ್ಯರ್
ಈ ಬಾರಿ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಕೆಎಲ್ ರಾಹುಲ್ ಅವರು ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇತ್ತ ಯುವ ಆಟಗಾರ ಶ್ರೇಯಸ್ ಐಯ್ಯರ್ ಕೂಡ ಡೆಲ್ಲಿ ಕ್ಯಾಪಿಟಲ್ ತಂಡದ ಚುಕ್ಕಾಣಿ ಹಿಡಿದಿದ್ದು, ಬ್ಯಾಟಿಂಗ್ ಮತ್ತು ನಾಯಕ್ವ ಎರಡು ವಿಚಾರದಲ್ಲಿ ರಾಹುಲ್ ಹಾಗೂ ಐಯ್ಯರ್ ನಡುವೆ ಇಂದು ಬಿಗ್ ಫೈಟ್ ನಡೆಯಲಿದೆ. ಜೊತೆಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಇಬ್ಬರಿಗೂ ಐಪಿಎಲ್ ಬಹಳ ಪ್ರಮುಖವಾಗಿದೆ.

ಪಂಟರ್ ವರ್ಸಸ್ ಜಂಬೋ
ಇಂದಿನ ಪಂದ್ಯಗಳು ಡೆಲ್ಲಿ ಮತ್ತು ಪಂಜಾಬ್ ತಂಡಗಳ ಕೋಚ್‍ಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಪಂಜಾಬ್ ತಂಡವನ್ನು ಅನಿಲ್ ಕುಂಬ್ಳೆಯವರು ಮುನ್ನಡೆಸುತ್ತಿದ್ದರೆ, ಇತ್ತ ಆಸ್ಟೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಕೋಚ್ ಮಾಡುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಮಾಜಿ ಆಟಗಾರರ ತರಬೇತಿಯಲ್ಲಿ ಪಳಗಿರುವ ಯುವ ತಂಡಗಳು ಇಂದು ಮುಖಾಮುಖಿಯಾಗಲಿವೆ.

ಮ್ಯಾಕ್ಸ್‌ವೆಲ್‌ಗೆ ಸ್ಟೋಯಿನಿಸ್ ಪವರ್
ಎರಡು ತಂಡದಲ್ಲಿ ವಿದೇಶಿ ಆಟಗಾರರ ದಂಡೇ ಇದೆ. ಆದರೆ ಆಸೀಸ್‍ನ ಸ್ಟಾರ್ ಆಲ್‍ರೌಂಡರ್ ಗಳಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಉಭಯ ತಂಡದಲ್ಲಿ ಇದ್ದಾರೆ. ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಮ್ಯಾಜಿಕ್ ಮಾಡಲು ತಯಾರಗಿದ್ದರೆ, ಇತ್ತ ಸ್ಟೋಯಿನಿಸ್ ಕೂಡ ಪಂಜಾಬ್‍ಗೆ ಟಾಂಗ್ ಕೊಡಲು ಸಿದ್ಧವಾಗಿದ್ದಾರೆ. ಈ ಇಬ್ಬರು ಆಟಗಾರರು ಒಳ್ಳೆಯ ಲಯದಲ್ಲಿದ್ದು, ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 174 ರನ್‍ಗಳ ಜೊತೆಯಾಟವಾಡಿದ್ದರು.

ಅಗರ್ವಾಲ್ ವರ್ಸಸ್ ಪೃಥ್ವಿ
ಡೋಪಿಂಗ್ ವಿಚಾರದಲ್ಲಿ ಕೆಲ ಕಾಲ ಕ್ರಿಕೆಟ್‍ನಿಂದ ಬ್ಯಾನ್ ಆಗಿದ್ದ ಪೃಥ್ವಿ ಶಾ ಕಾಮ್‍ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದ ಪರವಾಗಿ ಶಿಖರ್ ಧವನ್ ಅವರ ಜೊತೆ ಓಪನಿಂಗ್ ಮಾಡಲಿದ್ದಾರೆ. ಇತ್ತ ಮಯಾಂಕ್ ಅಗರ್ವಾಲ್ ಕೂಡ ಪಂಜಾಬ್ ತಂಡದಲ್ಲಿ ಆರಂಭಿಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ.

 

ವಿಕೆಟ್ ಕೀಪಿಂಗ್‍ನಲ್ಲಿ ರಾಹುಲ್, ಪಂತ್
ಉಭಯ ತಂಡದಲ್ಲಿ ಇಬ್ಬರು ಯುವ ವಿಕೆಟ್ ಕೀಪರ್ ಗಳು ಇದ್ದಾರೆ. ಡೆಲ್ಲಿಯಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಇತ್ತ ನಾಯಕ ರಾಹುಲ್ ಪಂಜಾಬ್ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಧೋನಿ ನಂತರ ಯಾರು ಟೀಂ ಇಂಡಿಯಾಗೆ ಖಾಯಂ ವಿಕೆಟ್ ಕೀಪರ್ ಆಗಲಿದ್ದಾರೆ ಎಂಬುದಕ್ಕೆ ಈ ಬಾರಿ ಐಪಿಎಲ್ ಉತ್ತರ ನೀಡಲಿದ್ದು, ರಿಷಭ್ ಮತ್ತು ರಾಹುಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಶಮಿ ಸ್ವಿಂಗ್, ಇಶಾಂತ್ ಬೌನ್ಸರ್
ಬೌಲಿಂಗ್ ವಿಭಾಗಕ್ಕೆ ಬಂದರೆ ಎರಡು ತಂಡಗಳು ಕೂಡ ಒಳ್ಳೆಯ ವೇಗಿಗಳನ್ನು ಹೊಂದಿದೆ. ಭಾರತದ ಟೀಂನಲ್ಲಿ ಅನುಭವಿ ವೇಗಿ ಎನಿಸಿಕೊಂಡಿರುವ ಮೊಹಮ್ಮದ್ ಶಮಿ ಪಂಜಾಬ್ ತಂಡಕ್ಕೆ ಸಾಥ್ ನೀಡಲಿದ್ದಾರೆ. ಮತ್ತೋರ್ವ ಅನುಭವಿ ವೇಗಿ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಇಬ್ಬರು ಅನುಭವಿ ವೇಗಿಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

Click to comment

Leave a Reply

Your email address will not be published. Required fields are marked *