Connect with us

Cricket

ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

Published

on

ಬೆಂಗಳೂರು: ಪ್ರತಿ ವರ್ಷ ಐಪಿಎಲ್ ಎಂದರೆ ಅಲ್ಲಿ ಹೆಚ್ಚು ಮಿಂಚುತ್ತಿದ್ದವರು ವಿದೇಶಿ ಆಟಗಾರರು. ಆದರೆ ಈ ಬಾರಿಯ ಐಪಿಎಲ್‍ನಲ್ಲಿ ಬದಲಾವಣೆ ಎಂಬಂತೆ ನಮ್ಮ ಭಾರತದ ಯುವ ಆಟಗಾರರ ಆರಂಭದಲ್ಲೇ ಅಬ್ಬರಿಸುತ್ತಿದ್ದಾರೆ.

ಈ ಬಾರಿಯ ಐಪಿಎಲ್‍ನಲ್ಲಿ ವಿದೇಶಿ ಆಟಗಾರರು ಮಂಕಾಗಿದ್ದಾರೆ. ಆದರೆ ನಮ್ಮ ಭಾರತದ ಯುವ ಆಟಗಾರರು ಐಪಿಎಲ್ ಆರಂಭದಲ್ಲೇ ರೊಚ್ಚಿಗೆಂದು ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲ. ಇಂಡಿಯನ್ಸ್ ಪ್ಲೇಯರ್ ಲೀಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಬದಲಾವಣೆಗೆ ಕಾರಣ ದ್ರಾವಿಡ್ ಎಂಬ ಅಭಿಪ್ರಾಯ ಕೇಳಿಬಂದಿದೆ.

ಗುರು ದ್ರಾವಿಡ್ ಗರಡಿಯಲ್ಲಿ ಪಳಗಿದ ಹುಡುಗರು
ಇಂದು ಐಪಿಎಲ್‍ನಲ್ಲಿ ಭಾರತದ ಹೊಸ ಪ್ರತಿಭೆಗಳು ಮಿಂಚುತ್ತಿವೆ. ಈ ಮೂಲಕ ಭಾರತದ ಮುಂದಿನ ಕ್ರಿಕೆಟ್ ಭವಿಷ್ಯ ಉತ್ತಮ ಆಟಗಾರರ ಕೈಲಿದೆ ಎಂಬ ಸಂದೇಶ ಜಗತ್ತಿಗೆ ರವಾನೆಯಾಗುತ್ತಿದೆ. ಇದಕ್ಕೆ ಒಂದು ಕಡೆಯಿಂದ ಭಾರತ ಮಾಜಿ ಆಟಗಾರ ಮತ್ತು ಇಂಡಿಯನ್ ಅಂಡರ್-19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರೇ ಕಾರಣ ಎಂಬುದು ಹಲವರ ವಾದ. ಅವರ ಗರಡಿಯಲ್ಲಿ ಪಳಗಿದ ಹಲವಾರು ಯುವ ಆಟಗಾರರು ಇಂದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಿದ್ದಾರೆ.

ಈ ಬಾರಿಯ ಐಪಿಎಲ್‍ನಲ್ಲಿ ಆರಂಭದಲ್ಲೇ ಯುವ ಬ್ಯಾಟ್ಸ್ ಮ್ಯಾನ್‍ಗಳಾದ ಆರ್‍ಸಿಬಿ ತಂಡ ದೇವದತ್ ಪಡಿಕಲ್, ರಾಜಸ್ಥಾನ್ ತಂಡದ ಸಂಜು ಸಮ್ಸನ್, ಕೋಲ್ಕತ್ತಾ ತಂಡದ ಶುಭಮನ್ ಗಿನ್, ಡೆಲ್ಲಿ ತಂಡದ ಪೃಥ್ವಿ ಶಾ ಮತ್ತು ಮುಂಬೈ ತಂಡದ ಇಶಾನ್ ಕಿಶಾನ್ ಮಿಂಚುತ್ತಿದ್ದಾರೆ. ಅಂತೆಯೇ ಬೌಲಿಂಗ್‍ನಲ್ಲಿ ಕೋಲ್ಕತ್ತಾ ತಂಡದ ಶಿವಮ್ ಮಾವಿ, ಕಮಲೇಶ್ ನಾಗರಕೋಟಿ ಮತ್ತು ಹೈದರಾಬಾದ್ ತಂಡದ ಟಿ ನಟರಾಜನ್ ಅವರು ಐಪಿಎಲ್‍ನಲ್ಲಿ ಮಿಂಚಿ ತಮ್ಮ ಟ್ಯಾಲೆಂಟ್ ಅನ್ನು ತೋರಿಸುತ್ತಿದ್ದಾರೆ. ಈ ಎಲ್ಲ ಆಟಗಾರರು ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಹುಡುಗರು.

ದೇವದತ್ ಪಡಿಕಲ್, ಶುಭಮನ್ ಗಿನ್, ಪೃಥ್ವಿ ಶಾ ಮತ್ತು ಇಶಾನ್ ಕಿಶಾನ್ ಅವರು ಭಾರತದ ಅಂಡರ್-19 ತಂಡದಲ್ಲಿ ಮಿಂಚಿದ್ದವರು. ಅಂದು ಅವರಿಗೆ ತರಬೇತಿ ನೀಡಿದ್ದು, ಇದೇ ಲೆಜೆಂಡ್ ದ್ರಾವಿಡ್ ಅವರು. ಜೊತೆಗೆ ಬೌಲರ್ ಆಗಿ ಮಿಂಚುತ್ತಿರುವ ಮಾವಿ, ನಾಗರಕೋಟಿ ಮತ್ತು ಟಿ ನಟರಾಜನ್ ಅವರು ಕೂಡ 2018ರ ಅಂಡರ್-19 ತಂಡದಲ್ಲಿ ಇದ್ದವರು. ಈ ಯುವ ಬೌಲರ್ ಗಳಿಗೂ ಕೂಡ ರಾಹುಲ್ ಅವರ ಸಲಹೆ ನೀಡಿ ಉತ್ತಮ ಆಟಗಾರರನ್ನಾಗಿ ಮಾಡಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರ ನಡೆದ ಕೋಲ್ಕತ್ತಾ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದ ಕಮಲೇಶ್ ನಾಗರಕೋಟಿ ಪಂದ್ಯ ಮುಗಿದ ನಂತರ ಮಾತನಾಡಿ, ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ಹೇಳಿದ್ದರು. ಜೊತೆಗೆ ಅವರ ತರಬೇತಿಯಲ್ಲಿ ಬಹಳ ಕಲಿತ್ತಿದ್ದೇವೆ ಎಂದು ತಿಳಿಸಿದ್ದರು. ಈ ಹಿಂದೆಯೇ ಕಮಲೇಶ್ ನಾಗರಕೋಟಿ ಬಗ್ಗೆ ಮಾತನಾಡಿದ್ದ ದ್ರಾವಿಡ್ ಅವರು, ಕಮಲೇಶ್ ಓರ್ವ ಉತ್ತಮ ಬೌಲರ್ ಮತ್ತು ಫೀಲ್ಡರ್. ಭಾರತಕ್ಕೆ ಈತ ಉತ್ತಮ ಆಟಗಾರನಾಗುತ್ತಾರೆ ಎಂದು ಹೇಳಿದ್ದರು.

ಅಂತಯೇ ಈ ಹಿಂದೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಟಿ ನಟರಾಜನ್ ಅವರು, ಭಾರತ-ಎ ತಂಡ ಸೌತ್ ಆಫ್ರಿಕಾಗೆ ಟೂರ್ ಹೋದಾಗ ದ್ರಾವಿಡ್ ಅವರು ನನಗೆ ಉತ್ತಮ ಸಲಹೆ ನೀಡಿದ್ದನ್ನು ನೆನಪಿಸಕೊಂಡಿದ್ದರು. ಇಂದು ಐಪಿಎಲ್‍ನಲ್ಲಿ ಸಿಕ್ಸರ್ ಸಿಡಿಸಿ ಮಿಂಚುತ್ತಿರುವ ಸಂಜು ಸಮ್ಸನ್ ಕೂಡ ಡ್ರಾವಿಡ್ ನನ್ನ ಗುರುಗಳಾದ ದ್ರಾವಿಡ್ ಅವರು ರಾಜಸ್ಥಾನಕ್ಕೆ ಮೆಂಟರ್ ಆಗಿದ್ದ ಸಮಯದಲ್ಲಿ ನನಗೆ ಉತ್ತಮವಾಗಿ ತರಬೇತಿ ನೀಡಿದ್ದರು ಎಂದು ಹೇಳಿಕೊಂಡಿದ್ದರು.

ಈ ಹಿಂದೆ ಒಂದು ಬಾರಿ ಭಾರತದ ಮುಖ್ಯ ತಂಡಕ್ಕೆ ರಾಹುಲ್ ದ್ರಾವಿಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ತೀರ್ಮಾನ ಮಾಡಿತ್ತು. ಆದರೆ ಈ ಹುದ್ದೆಯನ್ನು ತಿರಸ್ಕರಿಸಿದ್ದ ದ್ರಾವಿಡ್ ಅವರು, ಅಂದು ಭಾರತದ-ಎ ತಂಡಕ್ಕೆ ಕೋಚ್ ಆಗಿದ್ದರು. ಇಂದು ಅವರ ಪರಿಶ್ರಮದ ಫಲ ಎಂಬಂತೆ ಅವರ ಗರಡಿಯಲ್ಲಿ ಪಳಗಿದ ಹುಡುಗರು ಐಪಿಎಲ್‍ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. ಜೊತೆಗೆ ಬೌಲಿಂಗ್‍ನಲ್ಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *