Connect with us

Cricket

ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

Published

on

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುವಂತೆ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆದಿರುವ ವಾಡಿಯಾ, ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದಕ್ಕೆ ಬಿಸಿಸಿಐ ನಡೆಯನ್ನು ಶ್ಲಾಘಿಸಿದ್ದಾರೆ. ಈ ವೇಳೆ 2020 ರ ಐಪಿಎಲ್ ಆವೃತ್ತಿಯ ಪ್ರತಿ ಪಂದ್ಯಕ್ಕೂ ಮುನ್ನ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದಾರೆ.

ಸಾಮಾನ್ಯವಾಗಿ ಅಂತಾರಾಷ್ಟೀಯ ಮಟ್ಟದ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುತ್ತಾರೆ. ಆದರೆ ಐಪಿಎಲ್ ಕೂಡ ವಿಶ್ವದ ನಂಬರ್ ಒನ್ ಕ್ರಿಕೆಟ್ ಲೀಗ್ ಆಗಿದೆ. ಆದ್ದರಿಂದ ಐಪಿಎಲ್ ಪ್ರತಿ ಪಂದ್ಯದ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಹಾಡಿಸಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಿದ್ದು ಅತ್ಯುತ್ತಮ ನಡೆ. ಸಮಾರಂಭಕ್ಕೆ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಬದಲು ಪಂದ್ಯ ಮತ್ತು ಕ್ರೀಡಾ ಕೂಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ.

ನಾನು ಈ ವಿಚಾರವಾಗಿ ಈ ಮುಂಚೆಯೇ ಬಿಸಿಸಿಐಗೆ ಪತ್ರ ಬರೆದಿದ್ದೆ. ಆದರೆ ಈಗ ನೇರವಾಗಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿಗೆ ಪತ್ರ ಬರೆದಿದ್ದೇನೆ. ರಾಷ್ಟ್ರಗೀತೆಯನ್ನು ನಮ್ಮ ದೇಶದಲ್ಲಿ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಮತ್ತು ಪ್ರೊ-ಕಬ್ಬಡಿ ಲೀಗ್ ಪಂದ್ಯಗಳ ಆರಂಭಕ್ಕೂ ಮುನ್ನ ಹಾಡಿಸುತ್ತಾರೆ. ಹೊರ ದೇಶಗಳಲ್ಲೂ ಕೂಡ ಈ ವಿಧಾನ ಜಾರಿಯಲ್ಲಿದೆ. ಆದ್ದರಿಂದ ಐಪಿಎಲ್ ಲೀಗ್‍ನಲ್ಲೂ ಈ ವಿಧಾನ ಜಾರಿಗೆ ತರಬೇಕು ಎಂದು ವಾಡಿಯಾ ಮನವಿ ಮಾಡಿದ್ದಾರೆ.

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಭಾರತೀಯ ಕ್ರಿಕೆಟ್‍ನಲ್ಲಿ ಹಲವಾರು ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ಪ್ರತಿ ಐಪಿಎಲ್ ಆವೃತ್ತಿ ಆರಂಭದ ಸಮಯದಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆ ಆಗುತಿತ್ತು. ಈ ಉದ್ಘಾಟನಾ ಸಮಾರಂಭಕ್ಕೆ ಸೌರವ್ ಗಂಗೂಲಿ ಬ್ರೇಕ್ ಹಾಕಿದ್ದಾರೆ. ಇಲ್ಲಿಯವರೆಗೆ ಬಿಸಿಸಿಐ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರಲಿಲ್ಲ. ಗಂಗೂಲಿ ಅಧ್ಯಕ್ಷರಾದ ಬಳಿಕ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಮೊದಲ ಹಗಲು ರಾತ್ರಿ ಪಂದ್ಯ ಬಾಂಗ್ಲಾ ವಿರುದ್ಧ ನ.22 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ.