Wednesday, 26th June 2019

Recent News

ಕೊನೆಗೂ ಸೇಲಾದ ಗೇಲ್, ಉನಾದ್ಕತ್‍ಗೆ 11. 6 ಕೋಟಿ..!

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್‍ನ 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಸಿಲಿಕಾನ್ ಸಿಟಿಯಲ್ಲಿ ತೆರೆ ಬಿದ್ದಿದೆ. ಕಳೆದೆರಡು ದಿನಗಳಿಂದ ಚರ್ಚೆಯಲ್ಲಿದ್ದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಎರಡನೇ ದಿನ ನಡೆದ ಮೂರನೇ ಬಾರಿಯ ಬಿಡ್ಡಿಂಗ್‍ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್‍ಗೆ ಸೇಲ್ ಆಗಿದ್ದಾರೆ.

ಮೂಲ ಬೆಲೆ 2 ಕೋಟಿ ನಿಗದಿಯಾಗಿದ್ದ ಸಿಕ್ಸರ್ ಕಿಂಗ್‍ರನ್ನು ಬಿಡ್ಡಿಂಗ್ ನಲ್ಲಿ ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಿಟೆನ್ಶನ್ ಹಾಗೂ ರೈಟ್ ಟು ಮ್ಯಾಚ್ ಕಾರ್ಡ್‍ನಲ್ಲಿಯೂ ಗೇಲ್‍ರನ್ನು ಉಳಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಮನಸ್ಸು ಮಾಡಿರಲಿಲ್ಲ. ಆದರೆ 3ನೇ ಹಾಗೂ ಅಂತಿಮ ಬಾರಿ ಹರಾಜಿನಲ್ಲಿ ಮತ್ತೆ ಗೇಲ್ ಹೆಸರು ಬಂದಾಗ ಪ್ರೀತಿ ಜಿಂಟಾ ಮೂಲ ಬೆಲೆಗೆ ಗೇಲ್‍ರನ್ನು ತಂಡಕ್ಕೆ ಸೇರಿಸಿಕೊಂಡರು.

ಕುತೂಹಲಕಾರಿ ಅಂಶವೆಂದರೆ ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್, ಕಿಂಗ್ಸ್ ಪಂಜಾಬ್ ಬೌಲರ್ ಗಳನ್ನು ಅತಿಹೆಚ್ಚು ದಂಡಿಸಿದ ದಾಖಲೆ ಹೊಂದಿದ್ದಾರೆ. ಆದರೆ ಈ ಬಾರಿ ಗೇಲ್ ಅದೇ ತಂಡದ ಪರ ಬ್ಯಾಟ್ ಬೀಸಲಿದ್ದಾರೆ. ಜೊತೆಗೆ ಆರ್ ಸಿಬಿ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ಕೆ.ಎಲ್. ರಾಹುಲ್ ಹಾಗೂ ಕ್ರಿಸ್ ಗೇಲ್ ಈ ಬಾರಿ ಪಂಜಾಬ್ ಪರ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆ ಮೂಲಕ ಹರಾಜಿನಲ್ಲಿ ತಮ್ಮನ್ನು ನಿರ್ಲಕ್ಷಿಸಿದ ಫ್ರಾಂಚೈಸಿಗಳಿಗೆ ಗೇಲ್ ಯಾವ ರೀತಿಯಲ್ಲಿ ಬ್ಯಾಟ್ ಮೂಲಕ ಉತ್ತರಿಸುತ್ತಾರೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಗರಿಗೆದರಿದೆ.

ಐಪಿಎಲ್‍ನಲ್ಲಿ ಗೇಲ್ ಬ್ಯಾಟಿಂಗ್ ಸಾಧನೆ:
ಇನ್ನಿಂಗ್ಸ್ – 100
ರನ್ – 3626
ಅತಿಹೆಚ್ಚು ಮೊತ್ತ – 175*
ಶತಕ – 5
ಸಿಕ್ಸರ್ – 263
ಬೌಂಡರಿ – 293
ಬ್ಯಾಟಿಂಗ್ ಸರಾಸರಿ – 41.20
ಸ್ಟ್ರೈಕ್‍ರೇಟ್ – 151.21

ಹರಾಜಿಗೆ ತೆರೆ.. ಉನಾದ್ಕತ್‍ಗೆ ಬಂಪರ್..!
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಆರಂಭವಾದ ಐಪಿಎಲ್ ಹರಾಜು ಪ್ರಕ್ರಿಯೆಗೆ ಇಂದು ತೆರೆ ಬಿದ್ದಿದೆ. ಒಟ್ಟು 578 ಆಟಗಾರರ ಹೆಸರಿದ್ದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 182 ಗರಿಷ್ಠ ಆಟಗಾರರನ್ನು ಸೇರಿಸಿಕೊಳ್ಳಲು 8 ಫ್ರಾಂಚೈಸಿಗಳಿಗೆ ಅವಕಾಶವಿತ್ತು. ಆದರೆ ಕೇವಲ 169 ಆಟಗಾರರಷ್ಟೇ ಎರಡು ದಿನಗಳ ಕಾಲ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಬಿಕರಿಯಾಗಿದ್ದಾರೆ.

169 ಆಟಗಾರರಲ್ಲಿ 113 ಇಂಡಿಯನ್ ಪ್ಲೇಯರ್ಸ್, 56 ವಿದೇಶಿ ಆಟಗಾರರು, 91 ಅಂತರಾಷ್ಟ್ರೀಯ ಪಂದ್ಯ ಆಡಿದ ಆಟಗಾರರು, 77 ದೇಶಿ ಟೂರ್ನಿಗಳಲ್ಲಿ ಆಡಿ ಗಮನ ಸೆಳೆದಿರುವ ಆಟಗಾರರು, ಓರ್ವ ಐಸಿಸಿ ಸಹ ಸದಸ್ಯ ರಾಷ್ಟ್ರಗಳ ಆಟಗಾರ, ಹಾಗೂ 19 ಮಂದಿ ಆಟಗಾರರನ್ನು ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಂಡಿವೆ.

169 ಆಟಗಾರರಿಗೆ ಫ್ರಾಂಚೈಸಿಗಳು 2 ದಿನದಲ್ಲಿ ಒಟ್ಟು 431. 4 ಕೋಟಿ ರೂ. ವೆಚ್ಚ ಮಾಡಿವೆ. ಇದರಲ್ಲಿ ಕಳೆದ ಬಾರಿಯಂತೆ ಇಂಗ್ಲೆಂಡ್‍ನ ಬೆನ್ ಸ್ಟೋಕ್ಸ್ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದು, 12. 5 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಭಾರತೀಯ ಆಟಗಾರರಲ್ಲಿ ವೇಗದ ಬೌಲರ್ ಜಯದೇವ್ ಉನಾದ್ಕತ್‍ಗೆ ಬಂಪರ್ ಮೊತ್ತ ಲಭಿಸಿದೆ. 11. 5 ಕೋಟಿಗೆ ಉನಾದ್ಕತ್ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಇದೇ ಮೊದಲ ನೇಪಾಳಿ ಆಟಗಾರನೊಬ್ಬ ಐಪಿಎಲ್‍ಗೆ ಎಂಟ್ರಿ ಪಡೆದಿದ್ದಾರೆ.

ವೇಗದ ಬೌಲರ್ ಸಂದೀಪ್ ಲಮಿಚ್ಚಾನೆಗೆ ಮೂಲ ಬೆಲೆ 20 ಲಕ್ಷ ಕೊಟ್ಟು ಡೆಲ್ಲಿ ಡೇರ್‍ಡೆವಿಲ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಅದೇ ರೀತಿ ನಾಲ್ವರು ಅಫ್ಘನ್ ಆಟಗಾರರು ಇದೇ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಅತಿ ಹೆಚ್ಚು ಬೆಲೆಗೆ ಮಾರಾಟವಾದವರ ಪಟ್ಟಿಯನ್ನು ನೋಡೋದಾದ್ರೆ..
1. ಬೆನ್ ಸ್ಟೋಕ್ಸ್ – ರಾಜಸ್ಥಾನ ರಾಯಲ್ಸ್ – 12. 50 ಕೋಟಿ ರೂ.
2. ಜಯದೇವ್ ಉನಾದ್ಕತ್ – ರಾಜಸ್ಥಾನ ರಾಯಲ್ಸ್ – 11. 50 ಕೋಟಿ ರೂ.
3. ಮನೀಶ್ ಪಾಂಡೆ – ಸನ್‍ರೈಸರ್ಸ್ ಹೈದ್ರಾಬಾದ್ – 11 ಕೋಟಿ ರೂ.
4. ಕೆ. ಎಲ್ ರಾಹುಲ್ – ಕಿಂಗ್ಸ್ ಇಲೆವೆನ್ ಪಂಜಾಬ್ – 11 ಕೋಟಿ ರೂ.
5. ಕ್ರಿಸ್ ಲಿನ್ – ಕೋಲ್ಕತ್ತಾ ನೈಟ್ ರೈಡರ್ಸ್ – 9. 6 ಕೋಟಿ ರೂ.
6. ಮಿಚೆಲ್ ಸ್ಟಾರ್ಕ್ – ಕೋಲ್ಕತ್ತಾ ನೈಟ್ ರೈಡರ್ಸ್ – 9.4 ಕೋಟಿ ರೂ.
7. ಗ್ಲೇನ್ ಮ್ಯಾಕ್ಸ್ ವೆಲ್ – ಡೆಲ್ಲಿ ಡೇರ್‍ಡೆವಿಲ್ಸ್ – 9 ಕೋಟಿ ರೂ.
8. ರಶೀದ್ ಖಾನ್ – ಸನ್‍ರೈಸರ್ಸ್ ಹೈದ್ರಾಬಾದ್ – 9 ಕೋಟಿ ರೂ.
9. ಕೃನಾಲ್ ಪಾಂಡ್ಯ – ಮುಂಬೈ ಇಂಡಿಯನ್ಸ್ – 8.8 ಕೋಟಿ ರೂ.
10. ಸಂಜು ಸ್ಯಾಮ್ಸನ್ – ರಾಜಸ್ಥಾನ ರಾಯಲ್ಸ್ – 8 ಕೋಟಿ ರೂ.
11. ಕೇದಾರ್ ಜಾಧವ್ – ಚೆನ್ನೈ ಸೂಪರ್ ಕಿಂಗ್ಸ್ – 7.8 ಕೋಟಿ ರೂ.
12. ಕೃಷ್ಣಪ್ಪ ಗೌತಮ್ – ರಾಜಸ್ಥಾನ ರಾಯಲ್ಸ್ – 6. 20 ಕೋಟಿ ರೂ.

ಆಟಗಾರರ ಸಂಖ್ಯೆ – ತಂಡ – ವ್ಯಯಿಸಿದ ಮೊತ್ತ (ಕೋಟಿ ರೂ.ಗಳಲ್ಲಿ )
25 – ಚೆನ್ನೈ ಸೂಪರ್ ಕಿಂಗ್ಸ್ – 73.5 ಕೋಟಿ ರೂ.
25 – ಡೆಲ್ಲಿ ಡೇರ್‍ಡೆವಿಲ್ಸ್ – 78.4 ಕೋಟಿ ರೂ.
25 – ಮುಂಬೈ ಇಂಡಿಯನ್ಸ್ – 79.35 ಕೋಟಿ ರೂ.
25 – ಸನ್‍ರೈಸರ್ಸ್ ಹೈದ್ರಾಬಾದ್ – 79.35 ಕೋಟಿ ರೂ.
24 – ರಾಯಲ್ ಚಾಲೆಂಜರ್ಸ್ – ಬೆಂಗಳೂರು 79.85 ಕೋಟಿ ರೂ.
23 – ರಾಜಸ್ಥಾನ ರಾಯಲ್ಸ್ – 78.35 ಕೋಟಿ ರೂ.
21 – ಕಿಂಗ್ಸ್ ಇಲೆವನ್ ಪಂಜಾಬ್ – 79.80 ಕೋಟಿ ರೂ.
19 – ಕೋಲ್ಕತ್ತಾ ನೈಟ್ ರೈಡರ್ಸ್ – 80 ಕೋಟಿ ರೂ.

ಒಬ್ಬ ಆಟಗಾರನಿಗೆ ಯಾವ ತಂಡ ಎಷ್ಟು ಲಕ್ಷ ರೂ. ಹಣ ಖರ್ಚು ಮಾಡಿದೆ?

Leave a Reply

Your email address will not be published. Required fields are marked *