Connect with us

Cricket

ಕೊಹ್ಲಿ, ಪೊಲಾರ್ಡ್ ದಾಖಲೆ – ಈ ಬಾರಿಯ ಐಪಿಎಲ್ ನಿರೀಕ್ಷೆಗಳು ಏನು?

Published

on

ಚೆನ್ನೈ: ರಂಗಿನಾಟ ಐಪಿಎಲ್ ಟೂರ್ನಿಗೆ ಕೌಂಟ್‍ಡೌನ್ ಶುರುವಾಗಿದೆ. ಬೌಲರ್ ಎಸೆಯುವ ಉರಿಚೆಂಡನ್ನು ಸಿಕ್ಸರ್‍ ಗಟ್ಟುವ ಶೂರರು ಒಂದುಕಡೆಯಾದರೆ, ವೇಗ ಮತ್ತು ನಿಖರತೆಯಿಂದ ಎಂತಹ ದೈತ್ಯ ಬ್ಯಾಟ್ಸ್ ಮ್ಯಾನ್‍ನ್ನು ಖೆಡ್ಡಕ್ಕೆ ಬೀಳಿಸುವ ಬೌಲರ್‍ ಗಳು ಮತ್ತೊಂದೆಡೆ. ಹಕ್ಕಿಯಂತೆ ಹಾರಿ, ಚೆಂಡನ್ನು ಹಿಡಿಯುವ ಕ್ಷೇತ್ರ ರಕ್ಷಕ, ಆಟಗಾರರಿಗೆ ಧೈರ್ಯ ತುಂಬುವ ತರಬೇತುದಾರರು ಹೀಗೆ ಬಗೆಬಗೆಯ ಕ್ರಿಕೆಟ್ ರಸದೌತಣ ಉಣಬಡಿಸಲು ಐಪಿಎಲ್ ರಣಾಂಗಣ ಸಿದ್ಧವಾಗಿದೆ. ಈ ನಡುವೆ 14ನೇ ಆವೃತ್ತಿ ಐಪಿಎಲ್‍ನಲ್ಲಿ ಈ ಬಾರಿ ಕೆಲ ಆಟಗಾರರಿಂದ ಮತ್ತು ತಂಡಗಳಿಂದ ಈ ಅಂಶಗಳನ್ನು ನಿರೀಕ್ಷಿಸಬಹುದಾಗಿದೆ.

ಈ ಬಾರಿಯ ಐಪಿಎಲ್‍ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಇದರಲ್ಲಿ ಪ್ರತಿ ಆವೃತ್ತಿಗಳಲ್ಲಿ ಪ್ರಶಸ್ತಿಗೆಲ್ಲಲು ವಿಫಲವಾಗುತ್ತಿರುವ ಅಭಿಮಾನಿಗಳ ನೆಚ್ಚಿನ ಆರ್‌ಸಿಬಿ ತಂಡ ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ತಂಡದಲ್ಲಿ ವಿರಾಟ್ ಕೊಹ್ಲಿ, ಎ.ಬಿ.ಡಿ ವಿಲಿಯರ್ಸ್, ಮ್ಯಾಕ್ಸ್ ವೇಲ್, ಜೇಮಿಸನ್, ಮುಂತಾದ ಘಟಾನುಘಟಿ ಆಟಗಾರರು ಇದ್ದಾರೆ. ಹಾಗಾಗಿ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಹಾಟ್ ಫೇವ್‍ರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ಆರ್‌ಸಿಬಿ ಕಪ್ ಗೆಲ್ಲುವ ಫೇವ್‍ರೇಟ್ ತಂಡವಾಗಿ ಗುರುತಿಸಿಕೊಂಡಿರುವುದು ಒಂದು ಅಂಶವಾದರೆ ಇತ್ತ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಆರ್‌ಸಿಬಿ ಪರ 192 ಪಂದ್ಯಗಳನ್ನು ಆಡಿರುವ ಕೊಹ್ಲಿ ಇನ್ನು 8 ಪಂದ್ಯಗಳನ್ನು ಆಡಿದರೆ ಐಪಿಎಲ್‍ನಲ್ಲಿ 200 ಪಂದ್ಯಗಳನ್ನು ಆಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಈ ಮೊದಲು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 200 ಪಂದ್ಯಗಳನ್ನು ಆಡಿದ್ದಾರೆ. ಹಾಗಾಗಿ ಕೊಹ್ಲಿ ಮೇಲು ಈ ಒಂದು ನಿರೀಕ್ಷೆ ಇಡಬಹುದು. ಇದನ್ನು ಓದಿ ಐಪಿಎಲ್‍ನಲ್ಲಿ ಮತ್ತೊಂದು ದಾಖಲೆ ಬರೆಯಲು ಸಿದ್ಧರಾದ ವಿರಾಟ್ ಕೊಹ್ಲಿ 

ಜಯದ ನಾಗಾಲೋಟದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ 2019 ಮತ್ತು 2020 ರ ಆವೃತ್ತಿಯ ಐಪಿಎಲ್‍ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ. ಮುಂಬೈ ತಂಡ ಈ ಬಾರಿ ಮತ್ತೆ ಪ್ರಶಸ್ತಿಗಾಗಿ ಎದುರುನೋಡುತ್ತಿದೆ. ಈ ಬಾರಿ ಪ್ರಶಸ್ತಿ ಗೆದ್ದರೆ ಸತತ ಮೂರು ಬಾರಿ ಪ್ರಶಸ್ತಿ ಗೆದ್ದ ವಿಶೇಷ ಸಾಧನೆಗೆ ಮುಂಬೈ ಪಾತ್ರವಾಗಲಿದೆ ಹಾಗಾಗಿ ಈ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಈ ರೀತಿ ನಡೆದರೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ನಾಯಕನಾಗಿ ನೂತನ ದಾಖಲೆಗೆ ಪಾತ್ರರಾಗುತ್ತಾರೆ.

ಮುಂಬೈ ತಂಡದ ಸ್ಟಾರ್ ಆಟಗಾರ ಕೀರನ್ ಪೊಲಾರ್ಡ್ ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಸೇರಿ ಒಟ್ಟು 534 ಟಿ20 ಪಂದ್ಯಗಳನ್ನು ಆಡಿದ್ದು ಆಡಿರುವ ಪಂದ್ಯಗಳಲ್ಲಿ 293 ವಿಕೆಟ್ ಮತ್ತು 10 ಸಾವಿರ ರನ್ ಸಿಡಿಸಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಇನ್ನು 7 ವಿಕೆಟ್ ಕಬಳಿಸಿದರೆ ಟಿ20 ಕ್ರಿಕೆಟ್‍ನಲ್ಲಿ 300 ವಿಕೆಟ್ ಮತ್ತು 10 ಸಾವಿರ ರನ್ ಸಿಡಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಹಾಗಾಗಿ ಇದು ಕೂಡ ಬಾರಿ ನಿರೀಕ್ಷೆ ಹುಟ್ಟಿಸಿದೆ.

ಇಲ್ಲಿರುವ ನಿರೀಕ್ಷೆಗಳೊಂದಿಗೆ ಹಲವು ದಾಖಲೆಗಳು ನಿರೀಕ್ಷೆಗಳು ಅಭಿಮಾನಿಗಳ ಪಟ್ಟಿಗಳಲ್ಲಿದ್ದು, ಇವೆಲ್ಲವು ಯಾವರೀತಿ ನಡೆಯಲಿದೆ ಎಂಬುದನ್ನು ಏಪ್ರಿಲ್ 9 ರಿಂದ ಮೇ 30 ವರೆಗೆ ನೋಡಿ ಆನಂದಿಸಬಹುದಾಗಿದೆ.

Click to comment

Leave a Reply

Your email address will not be published. Required fields are marked *