Connect with us

Latest

ಅಯ್ಯರ್‌ಗೆ 12 ಲಕ್ಷ ದಂಡ – ಐಪಿಎಲ್‌ನಲ್ಲಿ ದಂಡ ಹಾಕೋದು ಯಾಕೆ?

Published

on

ಅಬುದಾಬಿ: ಹೈದರಾಬಾದ್‌ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ ಡೆಲ್ಲಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಇದನ್ನೂ ಓದಿ: 3 ವಿಕೆಟ್‌ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕ ಮಾತು

ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಎರಡನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

ಈ ಮೊದಲು ಬೆಂಗಳೂರು ಮತ್ತು ಪಂಜಾಬ್‌ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್‌ ಪ್ರದರ್ಶನ ನೀಡಿದ್ದಕ್ಕೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದನ್ನೂ ಓದಿ: 3 ವಿಕೆಟ್ ಪಡೆದು 14 ರನ್ ನೀಡಿದ ರಶೀದ್ – ಖಾನ್ ಸ್ಪಿನ್ ಮೋಡಿಗೆ ಡೆಲ್ಲಿ ಉಡೀಸ್

ದಂಡ ಯಾಕೆ?
ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ.

ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ.

ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಹೆಚ್ಚು ಸಮಯ ತೆಗೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಶಿಸ್ತುಬದ್ಧವಾಗಿ ನಡೆದುಕೊಂಡ ತಂಡಕ್ಕೆ ಫೇರ್‌ ಪ್ಲೇ ಅಂಕಗಳನ್ನು ನೀಡಲಾಗುತ್ತದೆ. ಇಬ್ಬರು ಫೀಲ್ಡ್‌ ಅಂಪೈರ್‌ ಮತ್ತು ಮೂರನೇ ಅಂಪೈರ್‌ ಈ ಅಂಕವನ್ನು ತಂಡಗಳಿಗೆ ನೀಡುತ್ತಾರೆ.

Click to comment

Leave a Reply

Your email address will not be published. Required fields are marked *