Connect with us

Latest

ಎಲ್ಲ ಮಾದರಿಯ ಕ್ರಿಕೆಟಿಗೆ ಶೇನ್‌ ವಾಟ್ಸನ್‌ ನಿವೃತ್ತಿ

Published

on

ದುಬೈ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ 39 ವರ್ಷದ ಶೇನ್‌ ವಾಟ್ಸನ್‌ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.

ಶೇನ್‌ ವಾರ್ನ್‌ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಥವಾ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ಹೇಳಿಲ್ಲ. ಭಾನುವಾರ ಚೆನ್ನೈ ತಂಡ ಪಂಜಾಬ್‌ ವಿರುದ್ಧ ಜಯಗಳಿಸಿದ ಬಳಿಕ ಸಹ ಆಟಗಾರರ ಜೊತೆ ನಿವೃತ್ತಿ ಘೋಷಣೆಯ ವಿಚಾರವನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಪಂಜಾಬ್‌ ವಿರುದ್ಧ ಗೆದ್ದ ಬಳಿಕ ವಾಟ್ಸನ್‌ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಈ ವಿಚಾರ ತಿಳಿಸುತ್ತಿದ್ದಂತೆ ಬಹಳ ಭಾವನಾತ್ಮಕವಾಗಿದ್ದರು. ಫ್ರಾಂಚೈಸಿಗಳ ಪರ ಆಡಿದ್ದಕ್ಕೆ ನನಗೆ ಬಹಳ ಹೆಮ್ಮೆಯಿದೆ ಎಂದು ಅವರು ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಈಗಾಗಲೇ ನಿವೃತ್ತಿ ಹೇಳಿರುವ ಶೇನ್‌ ವಾಟ್ಸನ್‌ 2008ರಲ್ಲಿ ರಾಜಸ್ಥಾನ ಪರ ಆಡಿದ್ದರು. ಈ ಆವೃತ್ತಿಯಲ್ಲಿ ರಾಜಸ್ಥಾನ ಚಾಂಪಿಯನ್‌ ಆಗಿದ್ದು ವಾಟ್ಸನ್‌ ಫೈನಲ್‌ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಬಳಿಕ ಆರ್‌ಸಿಬಿ ಪರ ಆಡಿದ್ದ ವಾಟ್ಸನ್‌ 2018ರಲ್ಲಿ ಚೆನ್ನೈ ಪರ ಆಡಲು ಆರಂಭಿಸಿದ್ದರು. ಚೆನ್ನೈ 4 ಕೋಟಿ ರೂ. ನೀಡಿ ವಾಟ್ಸನ್‌ ಅವರನ್ನು ಖರೀದಿಸಿತ್ತು.

2018 ರಲ್ಲಿ 15 ಪಂದ್ಯಗಳಿಂದ 555 ರನ್‌, 2019 ರಲ್ಲಿ 17 ಪಂದ್ಯಗಳಿಂದ 398 ರನ್‌ ಹೊಡೆದಿದ್ದ ವಾಟ್ಸನ್‌ ಈ ಬಾರಿ 11 ಪಂದ್ಯ ಮಾತ್ರ ಆಡಿದ್ದರು. 247 ಬಾಲ್‌ ಎದುರಿಸಿದ್ದ ವಾಟ್ಸನ್‌ 29.90 ಸರಾಸರಿಯಲ್ಲಿ 299 ರನ್‌ ಮಾತ್ರ ಹೊಡೆದಿದ್ದರು.

2018ರ ಐಪಿಎಲ್‌ ಫೈನಲ್‌ನಲ್ಲಿ ವಾಟ್ಸನ್‌ ಶತಕ ಸಿಡಿಸಿದ್ದರು. ಹೈದರಾಬಾದ್‌ ನೀಡಿದ್ದ 179 ರನ್‌ಗಳ ಗುರಿಯನ್ನು ಚೆನ್ನೈ 18.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 181 ರನ್‌ ಹೊಡೆಯುವ ಮೂಲಕ ಮುಟ್ಟಿತ್ತು. ಈ ಪಂದ್ಯದಲ್ಲಿ ವಾಟ್ಸನ್‌ ಔಟಾಗದೇ 57 ಎಸೆತದಲ್ಲಿ 11 ಬೌಂಡರಿ, 8 ಸಿಕ್ಸರ್‌ ಚಚ್ಚಿ 117 ರನ್‌ ಹೊಡೆದಿದ್ದರು. ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ವಾಟ್ಸನ್‌ ಪಾತ್ರರಾಗಿದ್ದರು.

Click to comment

Leave a Reply

Your email address will not be published. Required fields are marked *

www.publictv.in