Connect with us

Cricket

2ನೇ ಸೂಪರ್ ಓವರಿನಲ್ಲಿ ಬುಮ್ರಾ ಬೌಲಿಂಗ್ ಮಾಡದಿರಲು ಕಾರಣವೇನು?

Published

on

-ಸೂಪರ್ ಓವರ್ ಟೈ ಆದ್ರೆ ಫಲಿತಾಂಶ ನಿರ್ಧಾರ ಹೇಗೆ?

ದುಬೈ: ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಡಬಲ್ ಸೂಪರ್ ಓವರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಮರಣೀಯ ಗೆಲುವು ಪಡೆದಿದೆ. ಆದರೆ ಮೊದಲ ಸೂಪರ್ ಓವರ್ ಬೌಲ್ ಮಾಡಿದ ಬುಮ್ರಾ ಏಕೆ 2ನೇ ಓವರ್ ಬೌಲ್ ಮಾಡಲಿಲ್ಲ. ಸೂಪರ್ ಓವರ್ ಟೈ ಆದ್ರೆ ರೂಲ್ಸ್ ಏನು ಎಂಬ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್‍ಗಳ ನಷ್ಟಕ್ಕೆ 20 ಓವರ್ ಗಳಲ್ಲಿ 176 ರನ್ ಗಳಿಸಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೂಡ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಪರಿಣಾಮ ಪಂದ್ಯ ಸೂಪರ್ ಓವರಿಗೆ ದಾರಿ ಮಾಡಿಕೊಟ್ಟಿತ್ತು. ಮೊದಲ ಸೂಪರ್ ಓವರ್ ಕೂಡ ಟೈ ಆದ ಕಾರಣ 2ನೇ ಸೂಪರ್ ಓವರ್ ನಡೆಸಲಾಗಿತ್ತು. ಇದನ್ನೂ ಓದಿ: ಜೋರ್ಡಾನ್‌ ಎಡವಟ್ – ಒಂದು ಪಿಚ್‌ನಲ್ಲಿ ಬ್ಯಾಟಿಂಗ್‌ ಮತ್ತೊಂದು ಪಿಚ್‌ನಲ್ಲಿ ರನ್ನಿಂಗ್

ಎರಡು ತಂಡಗಳ ಪರ ಮೊದಲ ಸೂಪರ್ ಓವರ್ ಬೌಲ್ ಮಾಡಿದ್ದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ 2ನೇ ಸೂಪರ್ ಓವರಿನಿಂದ ಇಬ್ಬರು ಆಟಗಾರರು ದೂರ ಉಳಿದಿದ್ದರು. ಮೊದಲ ಸೂಪರ್ ಓವರಿನಲ್ಲಿ 5 ರನ್ ನೀಡಿ ಪೂರನ್, ರಾಹುಲ್ ವಿಕೆಟ್ ಪಡೆದು ಬುಮ್ರಾ ಮಿಂಚಿದ್ದರು. ಶಮಿ ಕೂಡ 5 ರನ್ ಮಾತ್ರ ನೀಡಿದ್ದರು. ಆದರೆ ಡಿ ಕಾಕ್ ಕೊನೆಯ ಎಸೆತದಲ್ಲಿ ರನೌಟ್ ಆಗಿದ್ದರು. ಇದನ್ನೂ ಓದಿ: ಚಂಗನೆ ಜಿಗಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂಪರ್‌ ಹ್ಯೂಮನ್‌ ಮಯಾಂಕ್‌

ನಿಯಮಗಳ ಅನ್ವಯ ಸೂಪರ್ ಓವರ್ ಟೈ ಆದ್ರೆ, ಮೊದಲ ಸೂಪರ್ ಓವರ್ ಬೌಲ್ ಮಾಡಿದ ಬೌಲರ್ ಗಳು ಮತ್ತೆ ಬೌಲ್ ಮಾಡುವಂತಿಲ್ಲ. ಈ ನಿಯಮಗಳ ಅನ್ವಯ ಬುಮ್ರಾ, ಶಮಿ 2ನೇ ಬಾರಿ ಬೌಲಿಂಗ್ ಮಾಡಲಿಲ್ಲ. ಅಲ್ಲದೇ ಮೊದಲ ಸೂಪರ್ ಓವರಿನಲ್ಲಿ ಔಟಾದ ಬ್ಯಾಟ್ಸ್ ಮನ್ಸ್ ಕೂಡ 2ನೇ ಸೂಪರ್ ಓವರಿನಿಂದ ದೂರ ಉಳಿಯಬೇಕಿದೆ. ನಿನ್ನೆಯ ಪಂದ್ಯದಲ್ಲಿ ಮೊದಲ ಸೂಪರ್ ಓವರಿನಲ್ಲಿ ಅಜೇಯರಾಗಿ ಉಳಿದಿದ್ದ ಪೋಲಾರ್ಡ್, ಪಾಂಡ್ಯದೊಂದಿಗೆ 2ನೇ ಸೂಪರ್ ಓವರಿನಲ್ಲಿ ಬ್ಯಾಟಿಂಗ್ ಮಾಡಿದ್ದರು.

2019ರ ವಿಶ್ವಕಪ್ ಚಾಂಪಿಯನ್ ಆಯ್ಕೆ ಕುರಿತಂತೆ ನಡೆದಿದ್ದ ವಿವಾದದ ಬಳಿಕ ಸೂಪರ್ ಓವರ್ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿತ್ತು. ವಿಶ್ವಕಪ್ ಸೂಪರ್ ಓವರಿನಲ್ಲಿ ಎದುರಾದ ಇಂಗ್ಲೆಂಡ್ ತಂಡ 15 ರನ್ ಗಳಿಸಿತ್ತು. ನ್ಯೂಜಿಲೆಂಡ್ ತಂಡ ಕೂಡ 15 ರನ್ ಗಳಿಸಿತ್ತು. ಅಂದು ಟ್ರೆಂಟ್ ಬೌಲ್ಟ್ ಎಸೆದ ಓವರಿನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ತಲಾ ಒಂದು ಬೌಂಡರಿ ಸಿಡಿಸಿದ್ದರು. ಇತ್ತ ಜೋಫ್ರಾ ಅರ್ಚರ್ ಎಸೆದ ಓವರಿನಲ್ಲಿ ನಿಶಮ್ ಒಂದು ಸಿಕ್ಸರ್ ಸಿಡಿಸಿದ್ದರು. ಆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ ಬೌಂಡರಿಗಳ ಅನ್ವಯ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.

ಪಂದ್ಯದ ಬಳಿಕ ಸೂಪರ್ ಓವರ್ ಟೈ ಆದ ಸಂದರ್ಭದಲ್ಲಿ ಬೌಂಡರಿ ಲೆಕ್ಕಾದಲ್ಲಿ ಗೆಲುವು ನಿರ್ಧರಿಸುವುದು ಸರಿಯಲ್ಲ ಎಂದು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಮಾಜಿ, ಹಾಲಿ ಕ್ರಿಕೆಟ್ ದಿಗ್ಗಜರು ಐಸಿಸಿಗೆ ಸಲಹೆ ನೀಡಿದ್ದರು. ಈ ಸಲಹೆಗಳ ಅನ್ವಯ ಸೂಪರ್ ಓವರ್ ಟೈ ಆದ್ರೆ 2ನೇ ಸೂಪರ್ ಓವರ್ ನಡೆಸಲು ಐಸಿಸಿ ನಿಯಮಗಳನ್ನು ಬದಲಿಸಿತ್ತು. ಇದನ್ನೂ ಓದಿ: ಇಳಿ ಸಂಜೆಯಲಿ ಪತ್ನಿಯ ಜೊತೆ ರೊಮ್ಯಾಂಟಿಕ್ ಮೂಡ್‍ನಲ್ಲಿ ಕೊಹ್ಲಿ

2007ರ ಭಾರತ ಪಾಕಿಸ್ತಾನ ನಡುವಿನ ಟಿ 20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ಬಾಲ್ ಔಟ್ ಮೂಲಕ ಪಾಕಿಸ್ತಾನವನ್ನು ಸೋಲಿಸಿತ್ತು. ಭಾರತದ ಬೌಲರ್ ಗಳು ಮೂರು ಬಾರಿ ವಿಕೆಟಿಗೆ ಬಾಲ್ ಹಾಕಿದರೆ ಆರಂಭದ ಮೂರು ಅವಕಾಶಗಳಲ್ಲಿ ಪಾಕಿಸ್ತಾನ ವಿಫಲವಾದ ಕಾರಣ ಭಾರತ ತಂಡ ಗೆದ್ದಿತ್ತು. ಈ ನಿಯಮಕ್ಕೆ ವ್ಯಾಪಕ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಒಂದು ಓವರ್ ಆಟ ಆಡಿಸಲು ಐಸಿಸಿ ನಿರ್ಧರಿಸಿತ್ತು. ಯಾವ ತಂಡ ಹೆಚ್ಚು ರನ್‍ಗಳಿಸುತ್ತದೋ ಆ ತಂಡ ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಆದರೆ 2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಸೂಪರ್ ಓವರ್‍ನಲ್ಲೂ ಟೈ ಆಗಿತ್ತು. ಆದರೆ ಅತಿ ಹೆಚ್ಚು ಬೌಂಡರಿ ಹೊಡೆದಿದ್ದ ಕಾರಣ ಇಂಗ್ಲೆಂಡ್ ವಿಶ್ವಕಪ್ ಜಯಿಸಿತ್ತು. ವಿಶ್ವಕಪ್‍ನಂತಹ ಮಹತ್ವದ ಪಂದ್ಯದಲ್ಲಿ ಬೌಂಡರಿ ಆಧಾರದ ಮೇಲೆ ಪಂದ್ಯ ನಿರ್ಧರಿಸುವುದಕ್ಕೆ ಘಟಾನುಘಟಿ ಆಟಗಾರರೇ ಭಾರೀ ವಿರೋಧ ವ್ಯಕ್ತಪಡಿಸಿದರು. ಟೀಕೆ ವ್ಯಕ್ತವಾದ ಬಳಿಕ ಐಸಿಸಿ 2020ರ ಫೆಬ್ರವರಿಯಲ್ಲಿ ಸೂಪರ್ ಓವರ್ ನಿಯಮಗಳನ್ನು ಬದಲಾವಣೆ ಮಾಡಿತು.

ಉಳಿದಂತೆ ಸೂಪರ್ ಓವರಿನಲ್ಲಿ ಒಂದು ವೇಳೆ ಎಸೆತಗಳು ಬಾಕಿ ಇದ್ದರೂ ಎದುರಾಳಿ ತಂಡದ ಎರಡು ವಿಕೆಟ್ ಪತನವಾದರೆ ಆಲೌಟ್ ಎಂದು ಘೋಷಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಂದು ಬಾರಿ ಅಂಪೈರ್ ತೀರ್ಮಾನವನ್ನು ಪುನರ್ ಪರಿಶೀಲಿಸಲು ಅವಕಾಶ ನೀಡಲಾಗುತ್ತದೆ.

 

Click to comment

Leave a Reply

Your email address will not be published. Required fields are marked *

www.publictv.in