Latest

ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ

Published

on

Share this

– ಗೆಲುವಿನ ಹತ್ತಿರ ಬಂದು ಸೋತ ಪಂಜಾಬ್
– ಐಪಿಎಲ್ ಇತಿಹಾಸದಲ್ಲಿ 10ನೇ ಸೂಪರ್ ಓವರ್

ದುಬೈ: ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಫೋಟಕವಾಗಿ ಆಡಿದ್ದರೂ ವಿಜಯ ಲಕ್ಷ್ಮಿ ಪಂಜಾಬ್ ತಂಡದ ಕೈ ಹಿಡಿಯಲಿಲ್ಲ. ಸೂಪರ್ ಓವರಿನಲ್ಲಿ  ಡೆಲ್ಲಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ.

ಗೆಲ್ಲಲು 157 ರನ್‍ಗಳ ಸುಲಭ ಸವಾಲನ್ನು ಪಡೆದಿದ್ದರೂ ಪಂಜಾಬ್ ತಂಡ ಬೇಗನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ಒಂದು ಕಡೆ ಮಾಯಾಂಕ್ ಅಗರ್ವಾಲ್ ಬಂಡೆಯಂತೆ ನಿಂತು 89 ರನ್(60 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದು ತಂಡವನ್ನು ವಿಜಯದ ಬಾಗಿಲ ಬಳಿ ತಂದು ನಿಲ್ಲಿಸಿದ್ದರು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟ ಪರಿಣಾಮ ಪಂದ್ಯ ಸೂಪರ್ ಓವರಿಗೆ ಹೋಯ್ತು.

ಟೈ ಹೇಗಾಯ್ತು?
ಕೊನೆಯ 18 ಎಸೆತಗಳಲ್ಲಿ ಪಂಜಾಬ್ 42 ರನ್ ಗಳಿಸಬೇಕಿತ್ತು. 18ನೇ ಓವರಿನಲ್ಲಿ 17 ರನ್ ಬಂದಿದ್ದರೆ, 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ  13 ರನ್ ಬೇಕಿತ್ತು. ಮಾರ್ಕಸ್ ಸ್ಟೊಯಿನಿಸ್ ಎಸೆದ ಮೊದಲ ಎಸೆತವನ್ನು ಅಗರ್ವಾಲ್ ಸಿಕ್ಸರ್ ಗೆ ಅಟ್ಟಿದ್ದರೆ ಎರಡನೇ ಎಸೆತದಲ್ಲಿ 2 ರನ್ ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತವನ್ನು ಬಲವಾಗಿ ಹೊಡೆದರೂ ಕ್ಯಾಚ್ ನೀಡಿ ಔಟಾದರು. ಕೊನೆಯ ಎಸೆತವನ್ನು ಎಡಗಡೆಗೆ ಜೋರ್ಡಾನ್ ಹೊಡೆದರೂ ಅದು ಕ್ಯಾಚ್ ಆಗಿತ್ತು. ಹೀಗಾಗಿ ಪಂದ್ಯ ಸೂಪರ್ ಓವರಿಗೆ  ಹೋಯ್ತು.

ಸೂಪರ್ ಓವರಿನಲ್ಲಿ ರಬಾಡ ಎಸೆದ ಮೊದಲ ಓವರ್‍ನಲ್ಲಿ 2 ರನ್ ಬಂದರೆ ಎರಡನೇ ಎಸೆತದಲ್ಲಿ ಕೆಎಲ್ ರಾಹುಲ್ ಕ್ಯಾಚ್ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಪೂರನ್ ಬೌಲ್ಡ್ ಆದರು. ಸೂಪರ್ ಓವರ್‍ನಲ್ಲಿ ಎರಡು ವಿಕೆಟ್ ಕಳೆದುಕೊಂಡರೆ ತಂಡ ಆಲೌಟ್ ಎಂದು ಘೋಷಿಸಲಾಗುತ್ತದೆ. ನಂತರ ಶಮಿ ಪಂಜಾಬ್ ಪರವಾಗಿ ಬೌಲಿಂಗ್ ಮಾಡಿದರು. ಒಂದು ವೈಡ್ ಜೊತೆಗೆ ರಿಷಬ್ ಪಂತ್ 2 ರನ್ ಹೊಡೆಯುವ ಮೂಲಕ ಡೆಲ್ಲಿ ತಂಡ ಪಂದ್ಯವನ್ನು ಜಯಗಳಿಸಿತು. ಐಪಿಎಲ್ ಇತಿಹಾಸದಲ್ಲಿ 10ನೇ ಸೂಪರ್ ಓವರ್ ಪಂದ್ಯ ಇದಾಗಿತ್ತು.

ಆರಂಭದಲ್ಲೇ ಕುಸಿತ:
ಕಿಂಗ್ಸ್ ಇಲೆವನ್ ಪಂಜಾಬ್ ತಂಡ 35 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ನಾಯಕ ಕೆಎಲ್ ರಾಹುಲ್ ಅವರು 19 ಬಾಲಿಗೆ 21 ರನ್ ಸಿಡಿಸಿ ಮೋಹಿತ್ ಶರ್ಮಾಗೆ ನಾಲ್ಕನೇ ಓವರಿನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಕ್ರಿಸ್‍ಗೆ ಬಂದ ಮತ್ತೋರ್ವ ಆಟಗಾರ ಕರುಣ್ ನಾಯರ್ ಕೇವಲ ಒಂದು ರನ್ ಗಳಿಸಿ ಆರ್ ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ಬಂದ ನಿಕೋಲಸ್ ಪೂರನ್ ಅವರ ಕೂಡ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸೊನ್ನೆ ಸುತ್ತಿ ವಾಪಸ್ ಹೋದರು. ಅಶ್ವಿನ್ ಅವರ ಒಂದೇ ಓವರಿನಲ್ಲಿ ಎರಡು ವಿಕೆಟ್ ಕಿತ್ತರು.

ನಾಲ್ಕನೇ ಬ್ಯಾಟ್ಸ್ ಮ್ಯಾನ್ ಆಗಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ ವೆಲ್ ಒಂದು ರನ್ ಗಳಿಸಿ ಕಗಿಸೊ ರಬಾಡ ಅವರ ಬೌಲಿಂಗ್‍ನಲ್ಲಿ ಶ್ರೇಯಾಸ್ ಅಯ್ಯರ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಇದಾದ ನಂತರ ಕೆಲ ಕಾಲ ಕ್ರಿಸ್‍ನಲ್ಲಿ ಉಳಿದುಕೊಳ್ಳುವ ಮುನ್ಸೂಚನೆ ನೀಡಿದ ಸರ್ಫರಾಜ್ ಖಾನ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕೇವಲ 12 ರನ್ ಗಳಿಸಿ ಆಕ್ಸಾರ್ ಪಟೇಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು.

ಈ ವೇಳೆ ಜೊತೆಯಾದ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ಉತ್ತಮ ಜೊತೆಯಾಟವಾಡಿದರು. 15 ಓವರ್ ಮುಕ್ತಾಕ್ಕೆ ಪಂಜಾಬ್ ತಂಡ 98 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮಯಾಂಕ್ ಅಗರ್ವಾಲ್ ಮತ್ತು ಗೌತಮ್ 6ನೇ ವಿಕೆಟಿಗೆ 46 ರನ್, ಅಗರ್ವಾಲ್ ಮತ್ತು ಜೋರ್ಡಾನ್ 7ನೇ ವಿಕೆಟಿಗೆ 56 ರನ್ ಜೊತೆಯಾಟವಾಡಿದ ಪರಿಣಾಮ ವಿಜಯದತ್ತ ಪಂಜಾಬ್ ಬಂದಿತ್ತು.

ಅಶ್ವಿನ್‍ಗೆ ಗಾಯ:
ಸ್ಪಿನ್ನರ್ ಆರ್. ಅಶ್ವಿನ್ ಫಿಲ್ಡಿಂಗ್ ವೇಳೆ ಕೈಗೆ ಗಾಯಗೊಂಡ ಪರಿಣಾಮ ಕ್ರೀಡಾಂಗಣವನ್ನು ತೊರೆದಿದ್ದರು. ಅಶ್ವಿನ್ 1 ಓವರ್ ಎಸೆದು 2 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement