Connect with us

Bengaluru City

ನೆರೆಯ ರಾಜ್ಯಗಳಿಗೆ KSRTC ಬಸ್ ಸಂಚಾರ ಆರಂಭಿಸಲು ಸಕಲ ಸಿದ್ಧತೆ- ಡಿಸಿಎಂ ಸವದಿ

Published

on

– ನೆರೆಯ ರಾಜ್ಯಗಳು ಒಪ್ಪಿದರೆ ರಾಜ್ಯದಿಂದ ಬಸ್ ಸಂಚಾರ

ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಸಡಿಲಗೊಳಿಸಿರುವುದರಿಂದ ರಾಜ್ಯದಿಂದ ಇತರ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಕೆಎಸ್‍ಆರ್‍ಟಿಸಿ ಸಿದ್ಧವಾಗಿದ್ದು, ನೆರೆಯ ರಾಜ್ಯಗಳು ಒಪ್ಪಿಗೆ ಸೂಚಿಸಿದರೆ ಇತರೆ ರಾಜ್ಯಗಳಿಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿಸಿಎಂ, ನೆರೆಯ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯಗಳು ಒಪ್ಪಿಗೆ ಸೂಚಿಸಿದರೆ ಬಸ್ ಸಂಚಾರ ಆರಂಭಿಸಲಾಗುವುದು. ಮುಖ್ಯವಾಗಿ ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಮತ್ತೆ ಬಸ್ ಸಂಚಾರ ಪ್ರಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಜ್ಜಾಗಿವೆ. ಆದರೆ ಪಕ್ಕದ ಎಲ್ಲ ರಾಜ್ಯಗಳಿಂದ ಇದಕ್ಕೆ ಹಸಿರು ನಿಶಾನೆ ದೊರೆಯಬೇಕಿದೆ ಎಂದಿದ್ದಾರೆ.

ಪರಿಸ್ಥಿತಿ ಸುಧಾರಣೆಗೊಂಡ ನಂತರ ಈಗಾಗಲೇ ಆಂಧ್ರ ಪ್ರದೇಶಕ್ಕೆ ಕರ್ನಾಟಕದಿಂದ ಸರ್ಕಾರಿ ಸಾರಿಗೆ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವಂತೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಅಲ್ಲದೆ ಆಯಾ ಸಾರಿಗೆ ಸಂಸ್ಥೆಗಳಲ್ಲಿ ಅಗತ್ಯ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಎಲ್ಲ ರಾಜ್ಯಗಳಿಂದ ಶೀಘ್ರವೇ ಸಕಾರಾತ್ಮಕ ಸ್ಪಂದನೆ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಆಯಾ ರಾಜ್ಯಗಳಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳನ್ನು ಆಧರಿಸಿ ಬಸ್ ಸಂಚಾರ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ. ಲಾಕ್‍ಡೌನ್‍ಗಿಂತ ಮುಂಚೆ ರಾಜ್ಯದಿಂದ ಒಟ್ಟು 2,500 ಸರ್ಕಾರಿ ಬಸ್‍ಗಳು ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಈಗ ಮುಂಚಿನಂತೆ ಮತ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸವದಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *