Thursday, 5th December 2019

Recent News

ಪ್ರೀತಿಸು ಎಂದು ಕಿರುಕುಳ – ಪೋಷಕರ ಗೌರವ ಹಾಳಾಗುತ್ತೆಂದು ವಿದ್ಯಾರ್ಥಿನಿ ನೇಣಿಗೆ ಶರಣು

ಹೈದರಾಬಾದ್: ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬನ ಕಿರುಕುಳವನ್ನು ಸಹಿಸಲಾಗದೇ ಪಿಯುಸಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮಾಮಿಡಿಕುಡುರು ಮಂಡಲದ ಗೋಗಣ್ಣಮಾಟಂ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಧು ಶ್ರೀ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಶುಕ್ರವಾರ ತನ್ನ ಮನೆಯ ಆವರಣದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಮೃತ ಮಧುಗೆ ಅದೇ ಗ್ರಾಮದ ಅಖಿಲ್ ರಾಜೇಶ್ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನು. ಮಧು ಗ್ರಾಮದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಿನಿಂದ ಅಂದರೆ ಸುಮಾರು ಒಂದು ವರ್ಷದಿಂದ ರಾಜೇಶ್ ಮಧುಗೆ ಕಿರುಕುಳ ನೀಡುತ್ತಿದ್ದನು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಇಬ್ಬರು ಅಪ್ರಾಪ್ತ ವಯಸ್ಸಿನವರಾಗಿದ್ದರಿಂದ ಇಬ್ಬರಿಗೂ ಬುದ್ಧಿ ಮಾತು ಹೇಳಿ ಕಳುಹಿಸಿದ್ದರು.

ಕೊನೆಗೆ ಮಧು ಪೋಷಕರು ಆಕೆಯನ್ನು ಪಕ್ಕದ ಗ್ರಾಮದ ಶಾಲೆಗೆ ಸೇರಿಸಿದ್ದರು. ಅಲ್ಲಿ ಅವಳು ಶಾಲೆಯನ್ನು ಮುಗಿಸಿ ಶ್ರೀ ಚೈತನ್ಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು. ಪೊಲೀಸರು ಎಚ್ಚರಿಕೆ ಕೊಟ್ಟಿದ್ದರು ರಾಜೇಶ್ ಮತ್ತೆ ಅವಳಿಗೆ ಪ್ರೀತಿಸು ಎಂದು ಕಿರುಕುಳ ನೀಡುತ್ತಲೇ ಇದ್ದನು. ಅದರಲ್ಲೂ ಬಸ್ ನಿಲ್ದಾಣದಲ್ಲಿ ಅವಳು ಕಾಲೇಜಿಗೆ ಹೋಗುವಾಗ ಮತ್ತು ವಾಪಸ್ ಬರುತ್ತಿದ್ದಾಗ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ಮಧು ಈತನ ಕಿರುಕುಳದಿಂದ ಪೋಷಕರ ಗೌರವ ಹಾಳಾಗುತ್ತದೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಪರಾರಿಯಾಗಿರುವ ಆರೋಪಿಗೆ ಬಲೆ ಬೀಸಿದ್ದಾರೆ. ಆರೋಪಿ ರಾಜೇಶ್ ಮಾತ್ರ ಮಧು ಸಾವಿನ ಬಗ್ಗೆ ತಿಳಿದು ‘ನೀನು ನನ್ನನ್ನು ಬಿಟ್ಟು ಹೋಗಿದ್ದೀಯಾ?’ ಎಂದು ವಾಟ್ಸಪ್‍ನಲ್ಲಿ ಸ್ಟೇಟಸ್ ಹಾಕಿ ಜೊತೆಗೆ ಟಿಕ್‍ಟಾಕ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ.

Leave a Reply

Your email address will not be published. Required fields are marked *