Recent News

ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

ಬೆಂಗಳೂರು: ಬಿಜೆಪಿಯ ನಾಯಕರ ಒಳ ಜಗಳದಿಂದಾಗಿ ಯಡಿಯೂರಪ್ಪ ಬರೆದಿದ್ದ ಡೈರಿ ಡಿಕೆ ಶಿವಕುಮಾರ್ ಕೈ ಸೇರಿತ್ತು ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿಯ ಮೂವರು ನಾಯಕರ ಒಳ ಜಗಳದಿಂದಾಗಿ ಡೈರಿ ಡಿಕೆ ಶಿವಕುಮಾರ್ ಕೈ ಸೇರಿತ್ತು. ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿ ಈ ಡೈರಿ ವಶಪಡಿಸಿಕೊಂಡಿತ್ತು. 2017 ರಿಂದ ಈ ಡೈರಿ ಆದಾಯ ತೆರಿಗೆ ಇಲಾಖೆಯಲ್ಲೇ ಇದ್ದು, ನಂತರ ಈ ಡೈರಿಯ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ಕಾಂಗ್ರೆಸ್ ‘ಕ್ಯಾರವಾನ್’ ವರದಿಯನ್ನು ಉಲ್ಲೇಖಿಸಿ ಆರೋಪಿಸಿದೆ.

ಕಾಂಗ್ರೆಸ್ ಆರೋಪ ಏನು?
2017 ರಿಂದ ಡೈರಿ ಐಟಿ ಇಲಾಖೆಯ ಬಳಿ ಈ ಡೈರಿಯಲ್ಲಿ ನೀಡಿರುವ ಮಾಹಿತಿಯಂತೆ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ವೇಳೆ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಭಾರೀ ಮೊತ್ತದ ಹಣವನ್ನು ಹೈಕಮಾಂಡ್‍ಗೆ ರವಾನೆ ಮಾಡಿದ್ದರು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಸೂಕ್ತ ಸಮಯದಲ್ಲಿ ಡೈರಿಯ ವಿಚಾರವನ್ನು ಬಹಿರಂಗ ಪಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿತ್ತು. ಇದರಂತೆ ಈಗ ಬಹಿರಂಗ ಪಡಿಸಲಾಗಿದೆ. ಆದರೆ ಐಟಿ ಅಧಿಕಾರಿಗಳ ಬಳಿ ಡೈರಿ ಇದ್ದರೂ ಕೂಡ ಏಕೆ ಕ್ರಮಕೈಗೊಳ್ಳಲಿಲ್ಲ ಎಂಬುದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.

ಡಿಕೆಶಿಗೆ ಸಿಕ್ಕಿದ್ದು ಹೇಗೆ?
ಬಿಎಸ್‍ವೈ ನಿವಾಸದಲ್ಲಿ ಇದ್ದ ಡೈರಿಯನ್ನು ಕಳವು ಮಾಡಿ ಅದರ ಜೆರಾಕ್ಸ್ ಪ್ರತಿಯನ್ನು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿತ್ತು. ಬಿಎಸ್ ಯಡಿಯೂರಪ್ಪ ಅವರ ಆಪ್ತ ಸಿಬ್ಬಂದಿಯೇ ಈ ಡೈರಿಯನ್ನು ಕಳ್ಳತನ ಮಾಡಿದ್ದರು. ಬಿಜೆಪಿಯಿಂದ ಹೊರಬಂದ ಬಿಎಸ್‍ವೈ ಅವರು ಕೆಜೆಪಿ ಪಕ್ಷ ಬಲ ಪಡಿಸುವ ನಿಟ್ಟಿನಲ್ಲಿ ಇದ್ದರು. ಈ ವೇಳೆ ಅನಂತಕುಮಾರ್, ಈಶ್ವರಪ್ಪ, ಆರ್. ಅಶೋಕ್ ಅವರೊಂದಿಗಿನ ಸಂಬಂಧಗಳು ಹದೆಗೆಟ್ಟಿದ್ದ ಕಾರಣ ಅವರೇ ಡೈರಿ ಕಳ್ಳತನದ ಹಿಂದೆ ಶಾಮೀಲಾಗಿದ್ದರು.

ರಾಜಕೀಯವಾಗಿ ಬಿಎಸ್‍ವೈ ಅವರಿಗೆ ಹಿನ್ನಡೆ ಉಂಟು ಮಾಡಲು ಬಿಜೆಪಿ ನಾಯಕರೇ ಈ ಡೈರಿಯನ್ನು ತೆಗೆದಿದ್ದಾರೆ. ಕಾಂಗ್ರೆಸ್ಸಿನ ಪ್ರಭಾವಿ ರಾಜಕಾರಣಿಗೆ ಡೈರಿಯ ಜೆರಾಕ್ಸ್ ಪ್ರತಿ ರವಾನೆ ಮಾಡಿ ಆ ಮೂಲಕ ಬಿಎಸ್‍ವೈರನ್ನು ಸಕ್ರೀಯ ರಾಜಕಾರಣವನ್ನು ಅಂತ್ಯ ಮಾಡುವುದು ಇದರ ಉದ್ದೇಶವಾಗಿತ್ತು. ಹೀಗಾಗಿ ಡೈರಿಯ ಜೆರಾಕ್ಸ್ ಪ್ರತಿಯನ್ನು ಡಿಕೆ ಶಿವಕುಮಾರ್ ಮಾತ್ರವಲ್ಲದೇ ಇತರೇ ನಾಯಕರಿಗೂ ತಲುಪಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಪ್ರಶ್ನೆ:
ಐಟಿ ಅಧಿಕಾರಿಗಳಿಗೆ ಸಿಕ್ಕ ಡೈರಿಯಲ್ಲಿ ಇಷ್ಟೆಲ್ಲಾ ಮಾಹಿತಿ ಇದ್ದರು ಕೂಡ ಡೈರಿ ಸತ್ಯಾಂಶ ಏಕೆ ಹೊರಬೀಳಲಿಲ್ಲ? ಐಟಿ ಏಕೆ ಯಾವುದೇ ಸ್ಪಷ್ಟ ತನಿಖೆ ನಡೆಸಿಲ್ಲ? ಇದು ಅಸಲಿಯೋ? ನಕಲಿಯೋ? ಎಂದು ಐಟಿ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಬಿಎಸ್‍ವೈ ಸ್ಪಷ್ಟನೆ:
ಕಾಂಗ್ರೆಸ್ ಪಕ್ಷದ ಆರೋಪವನ್ನು ಅಲ್ಲಗೆಳೆದಿರುವ ಬಿಎಸ್‍ವೈ ರಾಜಕೀಯ ಲಾಭಕ್ಕಾಗಿ ಮಾತ್ರ ಈ ಆರೋಪ ಮಾಡಲಾಗಿದೆ. ಡೈರಿ ಬಗ್ಗೆ ಈ ಹಿಂದೆಯೇ ತನಿಖೆ ನಡೆಸಲಾಗಿದ್ದು, ನನ್ನ ಕೈ ಬರಹ ಕೂಡ ಪಡೆದು ಪರೀಕ್ಷೆ ನಡೆಸಲಾಗಿದೆ. ಬಳಿಕವೇ ಇದು ನಕಲಿ ಡೈರಿ ಎಂದು ದೃಢವಾಗಿದೆ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *