Monday, 20th August 2018

Recent News

ದೆಹಲಿಯಲ್ಲಿ ಶಾ ರಣತಂತ್ರ: ಏನಿದು ಆಪರೇಷನ್ 10 ಸ್ಟಾರ್ ಟಾರ್ಗೆಟ್? ಇಲ್ಲಿದೆ ಇನ್ ಸೈಡ್ ಸ್ಟೋರಿ

ಬೆಂಗಳೂರು: ಸಂಖ್ಯಾಬಲದ ಕೊರತೆಯ ನಡುವೆಯೂ ಸರ್ಕಾರ ರಚನೆ ಮಾಡಿಯೇ ಸಿದ್ಧ ಎಂದು ಮುನ್ನುಗ್ಗುತ್ತಿರುವ ಬಿಜೆಪಿ ಈಗ `ಆಪರೇಷನ್ 10 ಸ್ಟಾರ್’ ಟಾರ್ಗೆಟ್ ಮಾಡಿದೆ.

ದೆಹಲಿಯಿಂದಲೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ಲಾನ್ ರೂಪಿಸಿದ್ದು, ಈ ಕುರಿತು ರಾಜ್ಯದ ಕೆಲ ಬೆರಳೆಣಿಕೆ ನಾಯಕರಿಗಷ್ಟೇ ನಿರ್ದೇಶನ ನೀಡಿದ್ದಾರೆ. ಬಿಜೆಪಿ ಬಹುಮತ ಸಾಬೀತು ಪಡಿಸುವ ಅಗತ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಏನಿದು ಆಪರೇಷನ್ 10?
ಬಹುಮತ ಸಾಬೀತು ಪಡಿಸಲು ಕನಿಷ್ಠ ಅಗತ್ಯವಿರುವ ಶಾಸಕರ ಸಂಖ್ಯೆಗಿಂತಲೂ ಹೆಚ್ಚಿನ ಶಾಸಕರನ್ನು ಪಕ್ಷಕ್ಕೆ ಸೆಳೆಯವುದು. ಅದರಲ್ಲಿ ಪ್ರಮುಖ 10 ಶಾಸಕರನ್ನು ಆಯ್ಕೆ ಮಾಡಬೇಕು. ಹಿರಿಯ ನಾಯಕರಿಂದ ಕಡೆಗಣನೆಗೆ ಒಳಗಾಗಿ ಬೇಸರದಲ್ಲಿರುವ ಶಾಸಕರನ್ನು ಸೆಳೆಯಬೇಕು. ಪ್ರಮುಖವಾಗಿ ಮೈಸೂರು ಭಾಗದ ಅತೃಪ್ತರ ಮನವೊಲಿಸಬೇಕು. ಇದರ ಭಾಗವಾಗಿ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಅವರ ಜೊತೆಗೆ ಈಶ್ವರಪ್ಪ ಮಾತುಕತೆ ನಡೆಸಿದ್ದು, 2ನೇ ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎನ್ನಲಾಗಿದೆ.

ಹೈದರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಆತೃಪ್ತ ನಾಯಕರ ಮನವೊಲಿಸಬೇಕು. ಈ ವೇಳೆ ಕಾಂಗ್ರೆಸ್ ವಿರುದ್ಧ ಗೆದ್ದು ಅವರೊಂದಿಗೆ ಅಧಿಕಾರ ಹಂಚಿಕೆ ಹೇಗೆ ಎಂಬ ಅಂಶ ಮುಂದಿಟ್ಟು ಚರ್ಚಿಸಬೇಕು. ಬಿಎಸ್‍ವೈ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಲಿಂಗಾಯತ ಶಾಸಕರನ್ನು ಸೆಳೆಯಲು ಯತ್ನಿಸಬೇಕು. ಇದರ ಭಾಗವಾಗಿ ಈಗಾಗಲೇ 21 ಲಿಂಗಾಯತ ಶಾಸಕರಿಗೆ ಕರೆ ಮಾಡಿ ಸೆಳೆಯುವ ಪ್ರಯತ್ನ ನಡೆಸಲಾಗಿದೆ ಎನ್ನಲಾಗಿದೆ.

ಬಳ್ಳಾರಿ ಹಳೆಯ ನಾಯಕರನ್ನು ಸೆಳೆಯಬೇಕು. ಶ್ರೀ ರಾಮುಲು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ಈಗಾಗಲೇ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಬಿಟ್ಟು ಹೋದ ಮುಖಂಡರಿಗೂ ಮತ್ತೆ ಘರ್ ಪಾಪ್ಸಿ ಆಫರ್ ನೀಡಲಾಗಿದೆ. ಈ ಸಂಬಂಧ ಪಾವಗಡದ ವೆಂಕಟರಮಣಪ್ಪ ಅವರೊಂದಿಗೆ ಶ್ರೀ ರಾಮುಲು ಮಾತುಕತೆ ನಡೆಸಬೇಕು. ಅದೇ ರೀತಿಯಾಗಿ ಕುಷ್ಟಗಿಯ ಅಮರೇಗೌಡ ಬಯ್ಯಾಪುರ ಅವರ ಮನವೊಲಿಸಬೇಕು. ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡುವ ಬಗ್ಗೆಯೂ ಆಶ್ವಾಸನೆ ನೀಡುವ ಕುರಿತು ಭರವಸೆ ನೀಡಿ ಎರಡು ಪಕ್ಷದಲ್ಲಿ ಇರುವ ಶಾಸಕಿಯರನ್ನು ಸೆಳೆಯಲು ಯತ್ನಿಸಬೇಕು.

ಈ ತಂತ್ರದ ಪ್ರಮುಖ ಭಾಗವನ್ನು ಕೇಂದ್ರದ ನಾಯಕರೇ ನೇರವಾಗಿ ನಡೆಸುತ್ತಿದ್ದು, ರಾಜ್ಯ ನಾಯಕರಾದ ಶ್ರೀರಾಮುಲು, ಬಿಎಎಸ್‍ವೈ, ಆರ್ ಆಶೋಕ್ ಸೇರಿದಂತೆ ಕೆಲ ನಾಯಕರಿಗೆ ಮಾತ್ರ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ. ಈಗಾಗಲೇ ಬಿಎಸ್‍ವೈ ಅವರ ಜೆಡಿಎಸ್‍ನ ಕೆಲ ಅತೃಪ್ತ ಶಾಸಕರ ಸಂಪರ್ಕ ಬೆಳೆಸಿ ಮನವೊಲಿಸುವ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದರೆ ಸಾಬೀತು ಪಡಿಸುವ ವೇಳೆ ಸದನಕ್ಕೆ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಬರದಂತೆ ತಡೆಯಬೇಕು. ಇದು ಕೊನೆಯ ಅಸ್ತ್ರವಾಗಿದ್ದು, ಕನಿಷ್ಠ 10 ರಿಂದ 15 ಶಾಸಕರು ಗೈರು ಹಾಜರಾಗುವಂತೆ ನೋಡಿಕೊಂಡರೆ ಬಹುಮತ ಸಾಬೀತು ಪಡಿಸಬಹುದು ಎನ್ನುವ ಪ್ಲಾನ್ ಬಿಜೆಪಿ ಹಾಕಿಕೊಂಡಿದೆ.

Leave a Reply

Your email address will not be published. Required fields are marked *