Tuesday, 16th July 2019

ಸರ್ಕಾರಿ ಅಧಿಕಾರಿಗಳಿಂದ ನಿವೃತ್ತ ಸೈನಿಕನ ಕುಟುಂಬಕ್ಕೆ ಅನ್ಯಾಯ!

ತುಮಕೂರು: ಸೈನಿಕರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ದೇಶವನ್ನು ಕಾಯುತ್ತಾರೆ. ಇದಕ್ಕೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯೇ ಸಾಕ್ಷಿ. ಹೀಗಿರುವಾಗ ಸರ್ಕಾರ ಇಂತಹ ಯೋಧರ ಕುಟಂಬದ ಸಹಾಯಕ್ಕೆ ಎಷ್ಟರ ಮಟ್ಟಿಗೆ ಬರುತ್ತೆ ಎನ್ನುವ ಪ್ರಶ್ನೆ ಎದುರಾಗಿದೆ. ಜಿಲ್ಲೆಯ ಸೈನಿಕರಿಗೆ ಸರ್ಕಾರಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದ ಈ ಪ್ರಶ್ನೆ ಎದ್ದಿದೆ.

ಕುಣಿಗಲ್ ತಾಲೂಕಿನ ಸೂಳೆಕೊಪ್ಪದ ನಿವೃತ್ತ ಸೈನಿಕ ಆರ್. ಸಿದ್ದಲಿಂಗಯ್ಯರ ಕುಟುಂಬವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಸರ್ಕಾರದಿಂದ ನೀಡುವ ಭೂಮಿಗೆ ಕಳೆದ 20 ವರ್ಷಗಳಿಂದ ನಿವೃತ್ತ ಯೋಧನ ಕುಟುಂಬ ಅಲೆದಾಡುತ್ತಿದೆ. ಆದರೂ ಕೂಡ ತಾಲೂಕಿನ ಕಂದಾಯ ಅಧಿಕಾರಿಗಳು ಭೂಮಿ ಮಂಜೂರು ಮಾಡಲು ಮೀನ-ಮೇಷ ಎಣಿಸುತ್ತಿದ್ದಾರೆ.

ಆರ್. ಸಿದ್ದಲಿಂಗಯ್ಯ ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತಿಯಾಗಿದ್ದರು. ಸರ್ಕಾರಿ ಭೂಮಿಗಾಗಿ 1996ರಲ್ಲಿ ಅರ್ಜಿ ಹಾಕಿದ್ದರು. ಬಳಿಕ 1998ರಲ್ಲಿ ಅನಾರೋಗ್ಯದಿಂದ ತೀರಿಹೋಗಿದ್ದರು. ಸಿದ್ದಲಿಂಗಯ್ಯ ಮೃತಪಟ್ಟ ನಂತರ ಕುಟುಂಬಕ್ಕೆ ಜಮೀನು ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇದೂವರೆಗೆ ಜಮೀನು ಮಂಜೂರು ಮಾಡಿಲ್ಲ.

ತೆರೆದಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂಬರ್ 12 ರಲ್ಲಿ 4 ಎಕರೆ ಜಮೀನನ್ನು ಯೋಧನ ಕುಟುಂಬವೇ ಗುರುತಿಸಿಕೊಟ್ಟಿದೆ. ಸತತ 20 ವರ್ಷಗಳಿಂದ ಯೋಧನ ಪತ್ನಿ ಸ್ವರೂಪರಾಣಿ ಕಚೇರಿಗಳಿಗೆ ಅಲೆದು ಅಲೆದು ಹೈರಾಣಾಗಿದ್ದಾರೆ.

ಯೋಧರು ಹುತಾತ್ಮರಾದಾಗ ಸರ್ಕಾರಗಳು ದಿಢೀರ್ ಅನುಕಂಪ ತೋರಿಸಿ ಸೈನಿಕನ ಕುಟುಂಬದ ಜೊತೆ ನಾವಿದ್ದೇವೆ. ಯಾವೊಬ್ಬ ಸೈನಿಕರಿಗೆ ಕಷ್ಟವಾಗದಂತೆ ನಾವು ನೋಡಿಳ್ಳುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಈ ಎಲ್ಲ ಹೇಳಿಕೆಗಳು ಕೆಲ ದಿನಗಳಲ್ಲಿ ಮೂಲೆಗೆ ಸೇರುತ್ತವೆ. 20 ವರ್ಷದಿಂದ ನಾವು ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ನಮಗೆ ಜಾಗವನ್ನು ಮಂಜೂರು ಮಾಡಿಲ್ಲ ಎಂದು ಸ್ವರೂಪರಾಣಿ ದು:ಖ ವ್ಯಕ್ತ ವ್ಯಕ್ತಪಡಿಸಿ ಅಕ್ರೋಶ ಹೊರ ಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *