Connect with us

Bengaluru City

ಅಕ್ಕನ ಕುರಿತು ಮಾತಾಡಿದ್ದು ದುಃಖ ತಂದಿದೆ- ಕಣ್ಣೀರು ಹಾಕಿದ ಇಂದ್ರಜಿತ್

Published

on

– ಅವರ ಸಿದ್ಧಾಂತವೇ ಬೇರೆ, ಅವರದ್ದು ಸೈದ್ಧಾಂತಿಕ ಕೊಲೆ
– ಚಿರು ಸರ್ಜಾ ಕುರಿತ ಹೇಳಿಕೆ ವಾಪಸ್ ಪಡೆದಿದ್ದೇನೆ

ಬೆಂಗಳೂರು: ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಕುರಿತು ಹೇಳಿಕೆ ನೀಡಿರುವುದು ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ್ದಾರೆ.

ಈ ಕುರಿತು ಅವರ ನಿವಾಸದಲ್ಲಿ ಮಾತನಾಡಿರುವ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.

ಈ ಹಿಂದೆ ಒಬ್ಬ ನಟನ ಕುರಿತು ನಾನು ಹೇಳಿಕೆ ನೀಡಿದೆ. ಆದ್ರೆ ಸಾವಿನ ಬಳಿಕ ಈ ರೀತಿ ಹೇಳಬಾರದು ಎಂದು ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದೇನೆ. ನಮ್ಮಕ್ಕನ ಸಾವು ಸಾವಲ್ಲವೇ, ನಮಗೂ ತಾಯಿ ಇಲ್ಲವೇ, ಅವರು ಕ್ಯಾನ್ಸರ್ ರೋಗಿ, ಅವರಿಗೆ ನೋವಾಗುವುದಿಲ್ಲವೇ, ನಮ್ಮಕ್ಕನನ್ನು ಸಿದ್ಧಾಂತ ದೃಷ್ಟಿಯಿಂದ ಹಲವರು ಒಪ್ಪದಿರಬಹುದು. ಆದರೆ ಒಂದು ಸಾವು ತರುವಷ್ಟೂ ಸಿದ್ಧಾಂತ ಕ್ರೂರಿಯಾ ಎಂದು ಪ್ರಮೋದ್ ಮುತಾಲಿಕ್ ಹೆಸರನ್ನು ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.

ಸಿಸಿಬಿ ಪೊಲೀಸರ ಮೊದಲ ವಿಚಾರಣೆ ವೇಳೆ ಇಂದು ಮತ್ತಷ್ಟು ಸ್ಟೋಟಕ ಮಾಹಿತಿಗಳೊಂದಿಗೆ ಬರುವುದಾಗಿ ಹೇಳಿಕೆ ನೀಡಿದ್ದರು. ಎರಡನೇ ಹಂತದ ವಿಚಾರಣೆಯಲ್ಲಿ ನಟ- ನಟಿಯರ ಡ್ರಗ್ಸ್ ಡೀಲ್ ಸಂಬಂಧ ಟೆಕ್ನಿಕಲ್ ಎವಿಡೆನ್ಸ್ ಸಮೇತ ಹಾಜರಾಗುವುದಾಗಿ ಇಂದ್ರಜಿತ್ ಹೇಳಿದ್ದರು. ಅದರಂತೆ ಇಂದು ಇಂದ್ರಜಿತ್ ಹಾಜರಾಗುತ್ತಿದ್ದಾರೆ.

ಸಾಕ್ಷ್ಯಾಧಾರಗಳನ್ನು ಏನೇನು ಕೊಟ್ಟಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆಗೆ ಸಹಾಯವಾಗಲು ಸಾಕಷ್ಟು ದಾಖಲೆ ಹಾಗೂ ಮಾಹಿತಿಗಳನ್ನು ನೀಡಿದ್ದೇನೆ. ಪೂರಕವಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕಿರುವುದರಿಂದ ಇಂದು ಕರೆದಿದ್ದಾರೆ. ಹೀಗಾಗಿ ಮಾಹಿತಿ ನೀಡಲು, ಸಾಕ್ಷ್ಯಾಧಾರ ನೀಡಲು ತೆರಳುತ್ತಿದ್ದೇನೆ.

ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತದೆ ಎಂಬು ಹೇಳಲಾಗುತ್ತಿದೆ. ಆದರೆ ಈ ಹಿಂದೆ ಕೆಟ್ಟ ಹೆಸರು ಬರುತ್ತಿತ್ತು. ಇದನ್ನು ಸರಿ ಪಡಿಸುವ ಉದ್ದೇಶದಿಂದ, ಚಿತ್ರರಂಗವನ್ನು ಸ್ವಚ್ಛಗೊಳಿಸಬೇಕಿದೆ. ಇದರಲ್ಲಿ ಇತ್ತೀಚಿನ ನಟ, ನಟಿಯರು ಭಾಗಿಯಾಗಿದ್ದಾರೆ. ಈ ಕುರಿತು ಫಿಲ್ಮ್ ಚೇಂಬರ್ ಎಲ್ಲ ನಟ, ನಟಿಯರನ್ನು ಕರೆಸಿ ಎಚ್ಚರಿಕೆ, ಸಲಹೆ ನೀಡಿದ್ದರೆ ಈ ಮಟ್ಟಕ್ಕೆ ದೊಡ್ಡದಾಗುತ್ತಿರಲಿಲ್ಲ. ಇದಾವುದನ್ನೂ ವಾಣಿಜ್ಯ ಮಂಡಳಿ ಮಾಡಲಿಲ್ಲ. ಈ ರೀತಿ ಸ್ವಚ್ಛವಾಗುವುದರಿಂದ ಮುಂದೆ ಬರುವ ಯುವ, ನಟ, ನಟಿಯರಿಗೆ ಸಹಕಾರಿಯಾಗಲಿದೆ. ಹನಿಟ್ರ್ಯಾಪ್ ವಿಚಾರ ಬಂದಾಗಲೂ ಯಾರೂ ಕರೆಸಿ ಮಾತನಾಡಲಿಲ್ಲ ಎಂದು ದೂರಿದ್ದಾರೆ.

ತನಿಖಾಧಿಕಾರಿಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ, ನಿಮಗೆ ಗೊತ್ತಿದ್ದರೆ ನೀವೂ ಬಂದು ಹೇಳಿ, ಒಟ್ಟಿನಲ್ಲಿ ಚಿತ್ರರಂಗ ಸ್ವಚ್ಛವಾಗಬೇಕು. ನಮಗೆ ಸಪೋರ್ಟ್ ಬೇಕು ರಕ್ಷಣೆ ಅಗತ್ಯ ನನಗಿಲ್ಲ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಇಂದ್ರಜಿತ್ ಲಂಕೇಶ್ ಮನೆಯಿಂದ ಸಿಸಿಬಿ ಕಚೇರಿಗೆ ಹೊರಟಿದ್ದು, ಸ್ಯಾಂಡಲ್‍ವುಡ್ ಡ್ರಗ್ಸ್ ಡೀಲ್ ಸಂಬಂಧ ಮಹತ್ವದ ದಾಖಲೆಗಳನ್ನು ಇಂದ್ರಜಿತ್ ರೆಡಿ ಮಾಡಿಕೊಂಡಿದ್ದು, ಸಿಡಿ, ಫೋಟೋ, ದಾಖಲೆಗಳ ಜೊತೆಗೆ ಎಲ್ಲೆಲ್ಲಿ ಡೀಲ್ ನಡೆಯುತ್ತಿದೆ. ಯಾವ ಸ್ಟಾರ್ ನಟರು ಎಲ್ಲಿ ಸೇರುತ್ತಾರೆ ಎಂಬುವರ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಇಂದ್ರಜಿತ್ ಲಂಕೇಶ್ ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *