Saturday, 19th October 2019

Recent News

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ

-ಮೊದಲ ಎಸೆತದಲ್ಲಿ ವಿಕೆಟ್ ಪಡೆದ ವಿಜಯ್ ಶಂಕರ್

ಮ್ಯಾಂಚೆಸ್ಟರ್: ಸಾಂಪ್ರದಾಯಿಕ ಬದ್ಧವೈರಿಗಳಂದೇ ಗುರುತಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾಮುಖಿಯಾಗಿದ್ದವು. ಭಾರತ ನೀಡಿದ 337 ರನ್ ಗಳ ಗುರಿ ಬೆನ್ನತ್ತಿದ್ದ ಪಾಕ್, 40 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ ಕೇವಲ 212 ರನ್ ಕಲೆ ಹಾಕಿತು. ಭಾರತ ಸತತ ಏಳನೇ ಬಾರಿ ವಿಶ್ವಕಪ್ ಪಂದ್ಯದಲ್ಲಿ ಎದುರಾಳಿ ಪಾಕ್ ನ್ನು ಸೋಲಿಸುವ ಮೂಲಕ ಅಭೂತಪೂರ್ವ ಗೆಲುವನ್ನು ತನ್ನದಾಗಿಸಿಕೊಂಡಿತು. 89 ರನ್ ಗಳಿಂದ ಭಾರತ ಬದ್ಧವೈರಿಯನ್ನು ಸದೆಬಡೆಯುವ ಮೂಲಕ ಭಾರತೀಯರ ಹೃದಯವನ್ನು ಕದ್ದಿತು.

ಮಳೆ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ 40 ಓವರ್ ಗಳಲ್ಲಿ 302 ರನ್ ಗಳ ಗುರಿಯನ್ನು ನೀಡಲಾಗಿತ್ತು. ಡಕ್ವರ್ಸ್ ಲೂಯಿಸ್ ನಿಯಮದನ್ವಯ ಭಾರತ 89 ರನ್ ಗಳ ಗೆಲುವನ್ನು ತನ್ನದಾಗಿಸಿಕೊಂಡಿತು.

ಟೀಂ ಇಂಡಿಯಾ ನೀಡಿದ 337 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭದಲ್ಲಿಯೇ ದೊಡ್ಡ ಆಘಾತವನ್ನು ನೀಡಿತು. ಆರಂಭಿಕರಾಗಿ ಇಮಾಮ್ ಉಲ್ ಹಕ್ ಮತ್ತು ಫಖಾರ್ ಖಾನ್ ಕಣಕ್ಕಿಳಿದರು. ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ತಮ್ಮ ಬೌಲಿಂಗ್ ಮೂಲಕ ಪಾಕ್ ಆಟಗಾರರನ್ನು ಕಟ್ಟಿ ಹಾಕಿದರು. ಈ ನಡುವೆ ಐದನೇ ಓವರಿನ ನಾಲ್ಕನೇ ಎಸೆತದಲ್ಲಿ ಗಾಯಕ್ಕೊಳಗಾದ ಭುವನೇಶ್ವರ್ ಮೈದಾನದಿಂದ ಹೊರ ನಡೆದರು. ಓವರ್ ಪೂರ್ಣಗೊಳಿಸಲು ಬಂದ ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಇಮಾಮ್-ಉಲ್-ಹಕ್ ವಿಕೆಟ್ ಪಡೆದರು.

ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಬಾಬರ್ ಅಜಮ್ ರಕ್ಷಣಾತ್ಮಕ ಆಟದ ಮೊರೆ ಹೋದರು. ಫಖರ್ ಖಾನ್ ಮತ್ತು ಬಾಬರ್ ಜೊತೆಯಾಟ ತಂಡದ ಮೊತ್ತವನ್ನ ಚೇತರಿಕೆಯತ್ತ ತೆಗೆದುಕೊಂಡು ಹೋಗುವಲ್ಲಿ ಸಹಕಾರಿಯಾಯ್ತು. ನಾಲ್ಕನೇ ಓವರ್ ನಲ್ಲಿ ಫಖರ್ ಗೆ ಜೊತೆಯಾದ ಬಾಬರ್ ಅಜಮ್ 23ನೇ ಓವರ್ ವರೆಗೂ ಟೀಂ ಇಂಡಿಯಾ ಬೌಲರ್ ಗಳನ್ನು ದಣಿಸಿದರು. 23ನೇ ಓವರ್ ಕೊನೆಯ ಎಸೆತದಲ್ಲಿ ಕುಲ್ದೀಪ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಾಬರ್ ಮತ್ತು ಫಖರ್ ಜೊತೆಯಾಗಿ 117 ರನ್ ಕಲೆ ಹಾಕಿದರು. 48 ರನ್ ಗಳಿಸಿದ್ದ ಬಾಬರ್ ಅಜಮ್ ಅರ್ಧ ಶತಕ ವಂಚಿತರಾಗಿ ಮೈದಾನದಿಂದ ಹೆಜ್ಜೆ ಹಾಕಿದರು.

ಇತ್ತ 25/2 ನೇ ಎಸೆತದಲ್ಲಿ 62 ರನ್ ಗಳಿಸಿದ ಫಖರ್ ಕ್ಯಾಚ್ ನೀಡಿ ಔಟ್ ಆದರು. ಮೊಹಮ್ಮದ್ ಹಫೀಜ್ (9), ಶೋಯೆಬ್ ಮಲ್ಲಿಕ್ (0) ಇಬ್ಬರು ಆಟಗಾರರು ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಗೆ ತುತ್ತಾದರು. 30ನೇ ಓವರ್ ಮೊದಲೇ ಐದು ವಿಕೆಟ್ ಗಳನ್ನು ಕಳೆದುಕೊಂಡ ಬಳಿಕ ಪಾಕ್ ನಾಯಕ ಸರ್ಫರಾಜ್ ಮತ್ತು ಇಮಾದ್ ವಾಸಿಮ್ ವೇಗದ ಆಟಕ್ಕೆ ಮುಂದಾಗದೇ ರನ್ ಹೆಚ್ಚಿಸುವತ್ತ ಮುಂದಾದರು. ಆದರೆ ಸರ್ಫರಾಜ್ 30 ಎಸೆತದಲ್ಲಿ 12 ರನ್ ಗಳಿಸಿದ್ದ ವೇಳೆ ವಿಜಯ್ ಶಂಕರ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಇಮಾದ್ ವಾಸಿಮ್ ರಿಗೆ ಜೊತೆಯಾಗಿ ಶಾಬದ್ ಖಾನ್ ಜೊತೆಯಾದರು. ಗೆಲುವಿನ ಸನಿಹದಲ್ಲಿದ್ದ ಭಾರತಕ್ಕೆ ಸಂತೋಷಕ್ಕೆ ವರುಣ ದೇವ ಬ್ರೇಕ್ ನೀಡಿದ್ದರಿಂದ ಪಾಕಿಸ್ತಾನ 166 ರನ್ ಗಳಿಸಿದ್ದಾಗ ಪಂದ್ಯವನ್ನು ನಿಲ್ಲಿಸಲಾಯ್ತು.

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 140, ಕೆ.ಎಲ್.ರಾಹುಲ್ 57, ಕೊಹ್ಲಿ, 77, ಪಾಂಡ್ಯ 26, ಧೋನಿ 1, ವಿಜಯ್ ಶಂಕರ್ 15 (ಔಟಾಗದೆ) ಕೇದಾರ್ ಜಾಧವ್ 9 (ಔಟಾಗದೆ) ರನ್ ಕೆಲ ಹಾಕಿದರು. ಪಾಕಿಸ್ತಾನ ಬೌಲಿಂಗ್ ನಲ್ಲಿ ಮೊಹಮ್ಮದ ಅಮಿರ್ 10 ಓವರ್ ಗಳಲ್ಲಿ 47 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹಸನ್ ಅಲಿ ಮತ್ತು ವಹಬ್ ತಲಾ ಒಂದು ವಿಕೆಟ್ ಪಡೆದರು. 35ನೇ ಓವರ್ ನಲ್ಲಿ ಮಳೆರಾಯನ ಕೆಲ ಸಮಯ ಅಡ್ಡಿಯನ್ನುಂಟು ಮಾಡಿದ

ಭುವನೇಶ್ವರ್ ಗೆ ಸ್ನಾಯು ಸೆಳೆತ: ಟೀಂ ಇಂಡಿಯಾದ ಬಲಗೈ ವೇಗಿ ಪಾಕ್ ಬ್ಯಾಟಿಂಗ್ ಆರಂಭಿಸಿದಾಗ ತಮ್ಮ ಮೂರನೇ ಓವರ್ ನ ನಾಲ್ಕನೇ ಎಸೆತದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗದರು. ತಜ್ಞ ವೈದ್ಯರ ಸಂಪರ್ಕಿಸಿದ ಬಳಿಕ ಪಂದ್ಯದಿಂದ ಹೊರ ಉಳಿದರು. ಈಗಾಗಲೇ ಶಿಖರ್ ಧವನ್ ಗಾಯಗೊಂಡು ಪಂದ್ಯಗಳಿಗೆ ಅಲಭ್ಯರಾಗಿದ್ದು, ಇದೀಗ ಭುವನೇಶ್ವರ್ ಗಾಯಗೊಂಡಿದ್ದು, ತಂಡಕ್ಕೆ ಮತ್ತೊಂದು ಆಘಾತವಾಗಿದೆ.

ರೋ’ಹಿಟ್’: ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅಜೇಯ 122 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 57 ರನ್ ಗಳಿಸಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ನಡೆಸಿದರು. 34 ಎಸೆತಗಳಲ್ಲೇ 50 ರನ್ ಪೂರೈಸಿದ ರೋಹಿತ್ 85 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ವೃತ್ತಿಯ 24ನೇ ಶತಕ, 2019ರ ಟೂನಿಯಲ್ಲಿ 2ನೇ ಶತಕ ಸಿಡಿಸಿದರು. ಸಚಿನ್ (6), ಗಂಗೂಲಿ (5) ಮತ್ತು ಶಿಖರ್ ಧವನ್ (3) ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ.

ಟಾಸ್ ವಿಶೇಷ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಡೋ, ಪಾಕ್ ಕದನದಲ್ಲಿ ಇದುವರೆಗೂ ಇತ್ತಂಡಗಳು 6 ಬಾರಿ ಮುಖಾಮುಖಿಯಾಗಿತ್ತು. 6 ಪಂದ್ಯಗಳಲ್ಲಿ ಭಾರತ ಗೆಲುವು ಪಡೆದಿದ್ದರೆ, ಈ ಪಂದ್ಯಗಳಲ್ಲಿ ಟಾಸ್ ಗೆದ್ದ ನಾಯಕರು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಮೊದಲ ಬಾರಿಗೆ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಕೊಹ್ಲಿ ವಿಶ್ವ ದಾಖಲೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು, ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆ ಬರೆದರು. ಕೊಹ್ಲಿ 222 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿದ್ದು, ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ 11 ಸಾವಿರ ರನ್ ಪೂರ್ಣಗೊಳಿಸಿದ 9ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದು, ಭಾರತ ಪರ ಈ ಸಾಧನೆ ಮಾಡಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ.

ಟೀಂ ಇಂಡಿಯಾ ಪರ ಇದುವರೆಗೂ ಸಚಿನ್, ಗಂಗೂಲಿ 11 ಸಾವಿರ ರನ್ ಪೂರೈಸಿದ್ದಾರೆ. ಸಚಿನ್ ಏಕದಿನ ಕ್ರಿಕೆಟಿನಲ್ಲಿ 18,426 ರನ್ ಸಿಡಿಸಿದ್ದರೆ, ಗಂಗೂಲಿ 11,363 ರನ್ ಗಳಿಸಿದ್ದರೆ. ಉಳಿದಂತೆ ರಿಕಿ ಪಾಟಿಂಗ್ 286 ಇನ್ನಿಂಗ್ಸ್, ಸೌರವ್ ಗಂಗೂಲಿ 288 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.

ಧೋನಿ ವಿಶೇಷ ಸಾಧನೆ: ಇದುವರೆಗೂ ಧೋನಿ 341 ಏಕದಿನ ಪಂದ್ಯಗಳನ್ನು ಆಡಿದ್ದು, ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ 340 ಪಂದ್ಯಗಳನ್ನು ಆಡಿದ್ದರು. ಆ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ 461 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಧೋನಿ ಏಷ್ಯಾ ತಂಡದ ಪರ 3 ಪಂದ್ಯಗಳನ್ನಾಡಿದ್ದಾರೆ.

13 ವರ್ಷಗಳಿಂದ ಟೀಂ ಇಂಡಿಯಾ ತಂಡದ ಭಾಗವಾಗಿರುವ ಧೋನಿ 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದರು. ಆ ಬಳಿಕ ತಮ್ಮ ನಾಯಕತ್ವದಲ್ಲಿ ಐಸಿಸಿ ನಡೆಸುವ ಟಿ20, ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಗೆಲುವು ಪಡೆದು ತಂಡವನ್ನು ಮುನ್ನಡೆಸಿದ್ದರು.

Leave a Reply

Your email address will not be published. Required fields are marked *