Connect with us

Latest

ಮೂರನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಹಿಮಾ ದಾಸ್

Published

on

ನವದೆಹಲಿ: ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಎರಡು ವಾರಗಳಲ್ಲಿ ಮೂರು ಅಂತಾರಾಷ್ಟ್ರೀಯ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತವೇ ಹೆಮ್ಮೆ ಪಡುವ ಕೆಲಸ ಮಾಡಿದ್ದಾಳೆ.

ಶನಿವಾರ ಕ್ಲಾಡ್ನೊದಲ್ಲಿ ನಡೆದ ಕ್ಲಾಡ್ನೊ ಸ್ಮಾರಕ ಅಥ್ಲೆಟಿಕ್ಸ್ ಸ್ಪರ್ಧೆಯ ಮಹಿಳಾ ವಿಭಾಗದ 200 ಮೀಟರ್ ಓಟದಲ್ಲಿ 23.43 ಸೆಕೆಂಡ್‍ಗಲ್ಲಿ ಓಡಿ ಅಗ್ರ ಸ್ಥಾನ ಗಳಿಸಿದ ಹಿಮಾ ದಾಸ್ ಪ್ರಸಕ್ತ ಸಾಲಿನ ತನ್ನ ಮೂರನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಎರಡೇ ವಾರದಲ್ಲಿ ಮೂರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಈ ಹಿಂದೆ ಅಂದರೆ ಜುಲೈ 8 ರಂದು ಪೋಲೆಂಡಿನಲ್ಲಿ ನಡೆದ ಕುಂತೊ ಅಥ್ಲೆಟಿಕ್ಸ್ ಕೂಟದಲ್ಲಿನ ಮಹಿಳೆಯರ 200 ಮೀ. ಓಟದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಬಂಗಾರದ ಪದಕವನ್ನು ಗೆದ್ದುಕೊಂಡಿದ್ದರು. ಈ ಕ್ರೀಡಾಕೂಟದಲ್ಲಿ ಹಿಮಾ ದಾಸ್ ಅವರು 23.97 ಸೆಕೆಂಡ್‍ಗಳಲ್ಲಿ ತನ್ನ ಗುರಿಮುಟ್ಟಿ ಚಿನ್ನ ಗೆದ್ದರೆ, ಭಾರತದ ಮತ್ತೊಬ್ಬ ಓಟಗಾರ್ತಿ ವಿಕೆ ವಿಸ್ಮಯಾ 24.06 ಸೆಕೆಂಡ್‍ನಲ್ಲಿ ಓಡಿ ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು.

ಕುಂತೊ ಅಥ್ಲೆಟಿಕ್ಸ್ ಕೂಟಕ್ಕೂ ಮುಂಚೆ ಜುಲೈ 2 ರಂದು ಪೋಲೆಂಡಿನಲ್ಲೇ ನಡೆದ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಹಿಮಾ ದಾಸ್ 23.65 ಸೆಕೆಂಡ್‍ಗಳಲ್ಲಿ ರೇಸ್ ಪೂರೈಸಿ ಚಿನ್ನದ ಪದಕ ಗೆದ್ದಿದ್ದರು. ಬೆನ್ನು ನೋವಿನ ಸಮಸ್ಯೆ ಇದ್ದರೂ ಅದನ್ನು ಲೆಕ್ಕಿಸದ 19 ವರ್ಷದ ಹಿಮಾ ದಾಸ್ ಪ್ರಸಕ್ತ ಸಾಲಿನಲ್ಲಿ ಮೂರು ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದಿದ್ದಾರೆ.

ರಾಷ್ಟ್ರೀಯ ದಾಖಲೆಯ ವೀರ ಮುಹಮ್ಮದ್ ಅನಾಸ್ ಇದೇ ಕುಂತೊ ಅಥ್ಲೆಟಿಕ್ಸ್ ಕ್ರೀಡಾಕೂಟದ ಪುರುಷರ 200 ಮೀ. ಓಟದಲ್ಲಿ 21.18 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದಿದ್ದರು. ಎಂ.ಜಿ ಬಬೀರ್ 400 ಮೀ. ಹರ್ಡಲ್ಸ್ ನಲ್ಲಿ 50.21 ಸೆಕೆಂಡ್‍ಗಳ ಸಾಧನೆಯೊಂದಿಗೆ ಬಂಗಾರದ ಸಾಧನೆ ಮಾಡಿದ್ದಾರೆ. ಇದೇ ರೇಸ್‍ನಲ್ಲಿ ಜಿತಿನ್ ಪಾಲ್ 3ನೇ (52.26 ಸೆ.) ಸ್ಥಾನ ಪಡೆದುಕೊಂಡಿದ್ದರು.