Connect with us

Latest

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ?

Published

on

Share this

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಯೊಂದು ಎದ್ದಿದೆ.

ಹೌದು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಜತೆ ಮಂಗಳವಾರ ನಡೆಸಿದ ಸುದೀರ್ಘ ಚರ್ಚೆಯ ಬಳಿಕ ಈ ಪ್ರಶ್ನೆ ಎದ್ದಿದೆ.

ಬಿಹಾರದಲ್ಲಿ ಜೆಡಿಯು ಸೇರ್ಪಡೆಯಾಗಿ ನಿತೀಶ್ ಕುಮಾರ್ ಜೊತೆ ಸಿಟ್ಟಾಗಿ ಪಕ್ಷವನ್ನು ತೊರೆದಿದ್ದರು. ಹೀಗಾಗಿ ಪ್ರಶಾಂತ್ ಕಿಶೋರ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷವನ್ನು ಪ್ರಶಾಂತ್ ಕಿಶೋರ್ ಸೇರುವ ಸಾಧ್ಯತೆ ಹೆಚ್ಚಿದೆ.

ಮುಂದಿನ ವರ್ಷ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಕಾಂಗ್ರೆಸ್ ಈಗಲೇ ಸಿದ್ಧತೆ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಅವರನ್ನು ಕರೆ ತರಲು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.  ಇದನ್ನೂ ಓದಿ : ಅಮಿತ್ ಶಾ ಸಲಹೆ ನಂತ್ರ ಜೆಡಿಯುಗೆ ಪ್ರಶಾಂತ್ ಕಿಶೋರ್ ಸೇರ್ಪಡೆ

ಮಂಗಳವಾರ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಉತ್ತರ ಪ್ರದೇಶ ಚುನಾವಣೆಯನ್ನು ಕೇಂದ್ರಿಕರಿಸಿ ಸಭೆ ನಡೆಸಲಾಗಿದೆ ಎಂದು ಹೇಳಿದ್ದರೂ ಈ ಸಭೆಯ ಉದ್ದೇಶ ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆಯ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ಬಂಗಾಳ, ತಮಿಳುನಾಡು ವಿಧಾನಸಭೆ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ಎಂಕೆ ಸ್ಟಾಲಿನ್ ಪರವಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಈ ಚುನಾವಣೆಯ ಬಳಿಕ ಪ್ರಶಾಂತ್ ಕಿಶೋರ್, ಇಷ್ಟು ದಿನದ ಕೆಲಸ ಸಾಕಾಗಿದೆ. ಜೀವನದಲ್ಲಿ ವಿರಾಮ ತೆಗೆದುಕೊಂಡು ಬೇರೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಯಿಂದ ಮತ್ತೆ ಪ್ರಶಾಂತ್ ಕಿಶೋರ್ ರಾಜಕೀಯ ಸೇರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಪರ ಕೆಲಸ ಮಾಡಿದ್ದರು.

2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿಯೂ ಪ್ರಶಾಂತ್ ಕಿಶೋರ್ ತಮ್ಮ ರಾಜಕೀಯ ಚತುರತೆ ತೋರಿದ್ದರು. ಜಗನ್ ಮೋಹನ್ ರೆಡ್ಡಿ ಅವರ ಶ್ರಮ ಹಾಗೂ ಪ್ರಶಾಂತ್ ತಂತ್ರಗಾರಿಕೆ ಪರಿಣಾಮ ವೈಎಸ್‍ಆರ್ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿದಿತ್ತು.

Click to comment

Leave a Reply

Your email address will not be published. Required fields are marked *

Advertisement