Connect with us

International

ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

Published

on

ಬೀಜಿಂಗ್‌: ಚೀನಾದಲ್ಲಿ ವಾಕ್‌ ಸ್ವಾತಂತ್ರ್ಯ ಇಲ್ಲ ಎನ್ನುವುದು ಪ್ರಪಂಚಕ್ಕೆ ಗೊತ್ತಿದೆ. ಆದರೆ ಈಗ ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್‌ಸೈಟ್‌ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳ ಮೇಲೆ ಸೆನ್ಸಾರ್‌ ‌ ಕತ್ತರಿ ಪ್ರಯೋಗಿಸಿದೆ.

ಹೌದು. ಭಾರತದಲ್ಲಿ ಚೀನಾದ ಎಲ್ಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲು ಅವಕಾಶವಿದೆ. ಆದರೆ ಚೀನಾದಲ್ಲಿ ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ ಅನ್ನು ಸುಲಭವಾಗಿ ವೀಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಇಲ್ಲಿಯವರೆಗೆ ಚೀನಾದ ಮಂದಿ ವಿಪಿಎನ್‌(ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌) ಸರ್ವರ್‌ ಮೂಲಕ ಭಾರತದ ವೆಬ್‌ಸೈಟ್‌ಗಳನ್ನು ನೋಡುತ್ತಿದ್ದರು. ಭಾರತದ ವಾಹಿನಿಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಈಗ ಇದಕ್ಕೂ ಚೀನಾ ಕತ್ತರಿ ಹಾಕುವಲ್ಲಿ ಯಶಸ್ವಿಯಾಗಿದೆ.

ಕಳೆದ ಎರಡು ದಿನಗಳಿಂದ ಚೀನಾದಲ್ಲಿ ಎಕ್ಸ್‌ಪ್ರೆಸ್‌ವಿಪಿಎನ್‌ ಫೋನ್‌ ಮತ್ತು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿಲ್ಲ. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಚೀನಾದ ಶಕ್ತಿಶಾಲಿ ಫೈರ್‌ವಾಲ್‌ ಸೃಷ್ಟಿಸಿ ವಿಪಿಎನ್‌ಗಳನ್ನೇ ಬ್ಲಾಕ್‌ ಮಾಡುವಲ್ಲಿ ಯಶಸ್ವಿಯಾಗಿದೆ.

ಸೋಮವಾರ ಭಾರತ ಸರ್ಕಾರ ದೇಶದ ಪ್ರಜೆಗಳ ಪ್ರೈವೆಸಿ ಕಾರಣ ನೀಡಿ ಚೀನಾದ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಆದರೆ ಭಾರತದ ಈ ನಿರ್ಧಾರಕ್ಕೂ ಮೊದಲೇ ಚೀನಾ ವಿಪಿಎನ್‌ ಬ್ಲಾಕ್‌ ಮಾಡಿತ್ತು.

ಇಂಟರ್‌ನೆಟ್‌ ಸೆನ್ಸಾರ್‌ ‌ ಮಾಡುವ ವಿಚಾರದಲ್ಲಿ ವಿಶ್ವದಲ್ಲೇ ಚೀನಾ ಸದಾ ಮುಂದು. ಈಗಾಗಲೇ ಇಲ್ಲಿ ಫೇಸ್‌ಬುಕ್‌, ವಾಟ್ಸಪ್‌, ಯೂಟ್ಯೂಬ್‌ಗಳು ಸೇರಿದಂತೆ ಹಲವು ತಾಣಗಳು ನಿಷೇಧವಾಗಿದೆ. ಸುದ್ದಿ ತಾಣಗಳಾದ ಬ್ಲೂಮ್‌ ಬರ್ಗ್‌, ದಿ ವಾಲ್‌ ಸ್ಟ್ರೀಟ್‌ ಜರ್ನಲ್‌, ನ್ಯೂಯಾರ್ಕ್‌ ಟೈಮ್ಸ್‌ ಸಹ ಬ್ಲಾಕ್‌ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ಚೀನಾ ತನ್ನದೇ ಆದ ಮಸೇಜಿಂಗ್‌ ಅಪ್ಲಿಕೇಶನ್‌ ಮತ್ತು ಸಾಮಾಜಿಕ ಜಾಲತಾಣವನ್ನು ಹೊಂದಿದ್ದು ಇದರಲ್ಲೂ ದೇಶದ ವಿರುದ್ಧ ಕಮೆಂಟ್‌ ಮಾಡಿದರೆ ಸೆನ್ಸರ್‌ ಮಾಡುತ್ತದೆ. ತನ್ನ ವಿರುದ್ಧ ಯಾವುದೇ ಟೀಕೆಗಳನ್ನು ಚೀನಾ ಸಹಿಸುವುದಿಲ್ಲ. ಟೀಕೆ ಮಾಡುವ ವೆಬ್‌ಸೈಟ್‌ಗಳ ಯುಆರ್‌ಎಲ್‌ಗಳನ್ನು ಚೀನಾ ʼಗ್ರೇಟ್‌ ಫೈರ್‌ವಾಲ್‌ʼ ಮೂಲಕ ಬ್ಲಾಕ್‌ ಮಾಡಿಸುತ್ತದೆ.

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ನಲ್ಲಿ ಕಳೆದ ನವೆಂಬರ್‌ನಲ್ಲಿ ಬರೆಯಲಾದ ಅಂಕಣದ ಮಾಹಿತಿ ಪ್ರಕಾರ, 10 ಸಾವಿರ ವೆಬ್‌ಸೈಟ್‌ಗಳನ್ನು ಚೀನಾ ಬ್ಲಾಕ್‌ ಮಾಡಿದೆ. ಚೀನಾ ಸರ್ಕಾರ ಐಪಿ ಅಡ್ರೆಸ್‌, ಯುಆರ್‌ಲ್‌, ಕೀ ವರ್ಡ್‌ಗಳನ್ನು ಸಹ ಬ್ಲಾಕ್‌ ಮಾಡುತ್ತದೆ. ಕೋವಿಡ್‌ 19 ಆರಂಭದಲ್ಲಿ ಈ ವೈರಸ್‌ಗೆ ಸಂಬಂಧಿಸಿದ ಸುದ್ದಿಗಳು ಶೇರ್‌ ಆಗದಂತೆ ತಡೆಯಲು ಕೆಲವು ಕೀ ವರ್ಡ್‌ಗಳನ್ನು ತನ್ನ ಬ್ಲಾಕ್‌ ಮಾಡಿ ಸರ್ಚ್‌ ಆಗದಂತೆ ನೋಡಿಕೊಂಡಿತ್ತು.

ಲಡಾಖ್‌ ಗಡಿಯಲ್ಲಿ ಭಾರತೀಯ ಸೇನೆ ಚೀನಾದ ಪಿಎಲ್‌ಎ ಯೋಧರಿಗೆ ಬಿಸಿ ಮುಟ್ಟಿಸಿದ ಬಳಿಕ ಭಾರತದ ವೆಬ್‌ಸೈಟ್‌ಗಳಲ್ಲಿ ಚೀನಾದ ಕೃತ್ಯಗಳು ಬಯಲಾಗುತ್ತಿದೆ. ಅಷ್ಟೇ ಅಲ್ಲದೇ ಚೀನಾ ಯಾವೆಲ್ಲ ದೇಶಗಳ ಜೊತೆ ಕಿರಿಕ್‌ ಮಾಡಿದೆ ಅವುಗಳ ಬಗ್ಗೆ ದೀರ್ಘವಾದ ಬರಹಗಳು ಪ್ರಕಟವಾಗುತ್ತಿದೆ. ಈ ಬರಹಗಳು ತನ್ನ ಪ್ರಜೆಗಳ ಮೇಲೆ ಪ್ರಭಾವ ಉಂಟುಮಾಡುವ ಸಾಧ್ಯತೆ ಇರುವ ಕಾರಣ ಚೀನಾ ಈಗ ಭಾರತ ವೆಬ್‌ಸೈಟ್‌ಗಳು ಓಪನ್‌ ಆಗದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಗಲ್ವಾನ್‌ ಘರ್ಷಣೆಯ ಬಳಿಕ ಚೀನಾ ಸರ್ಕಾರದ ಮುಖವಾಣಿಯಾಗಿರುವ ಗ್ಲೋಬಲ್‌ ಟೈಮ್ಸ್‌ ಪ್ರತಿ ದಿನವೂ ಭಾರತದ ವಿರುದ್ಧ ಸುದ್ದಿಗಳನ್ನು ಪ್ರಕಟಿಸುತ್ತಿದೆ. ಇದಕ್ಕೆ ಭಾರತೀಯರು ಗ್ಲೋಬಲ್‌ ಟೈಮ್ಸ್‌ ಟ್ವೀಟ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡಿ ಅಲ್ಲೇ ಚೀನಾದ ಬಣ್ಣವನ್ನು ಬಯಲು ಮಾಡುತ್ತಿದ್ದಾರೆ.