Tuesday, 25th February 2020

ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ ಟೀಂ ಇಂಡಿಯಾ ಆಟಗಾರರು

ನವದೆಹಲಿ: ಮಾಜಿ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ನಿಧನಕ್ಕೆ ಬಿಸಿಸಿಐ ಶನಿವಾರ ಸಂತಾಪ ಸೂಚಿಸಿದೆ.

ರಾಜಕಾರಣಿ ಅರುಣ್ ಜೇಟ್ಲಿ ಅವರು ಕ್ರಿಕೆಟ್ ಬೆಂಬಲಿಗರಾಗಿದ್ದರು. ಅವರು ಅತ್ಯಂತ ಸಮರ್ಥ ಮತ್ತು ಗೌರವಾನ್ವಿತ ಕ್ರಿಕೆಟ್ ಆಡಳಿತಗಾರರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಶನಿವಾರ ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಅರುಣ್ ಜೇಟ್ಲಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘದ (ಡಿಡಿಸಿಎ) ಅಧ್ಯಕ್ಷರಾಗಿದ್ದರು. ಈ ವೇಳೆ ರಾಜ್ಯ ಕ್ರಿಕೆಟ್‍ನ ಆಡಳಿತದಲ್ಲಿ ಬದಲಾವಣೆ ತಂದಿದ್ದರು ಎಂದು ಶ್ಲಾಘಿಸಿದೆ.

ಡಿಡಿಸಿಎ ಅಧ್ಯಕ್ಷರಾಗಿ ಸುದೀರ್ಘ ಅವಧಿಯಲ್ಲಿ ಅವರು ಮೂಲಸೌಕರ್ಯದಲ್ಲಿ ಭಾರೀ ಬದಲಾವಣೆಯನ್ನು ತಂದರು. ಕ್ರಿಕೆಟಿಗರ ಆಪ್ತ ಸ್ನೇಹಿತರಾದ ಅವರು ಯಾವಾಗಲೂ ಅವರೊಂದಿಗೆ ನಿಲ್ಲುತ್ತಿದ್ದರು, ಆಟಗಾರರನ್ನು ಪ್ರೋತ್ಸಾಹಿಸಿದರು. ಉತ್ತಮ ಆಟಗಾರರಿಗೆ ಆಯ್ಕೆ ಮಾಡಿ ಅವರನ್ನು ಬೆಂಬಲಿಸುತ್ತಿದ್ದರು ಎಂದು ಬಿಸಿಸಿಐ ನೆನೆದಿದೆ.

ಬಿಸಿಸಿಐ ಜೇಟ್ಲಿ ಅವರ ಕುಟುಂಬದ ನೋವು ಮತ್ತು ದುಃಖವನ್ನು ಹಂಚಿಕೊಳ್ಳುತ್ತದೆ. ಅರುಣ್ ಜೇಟ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತದೆ ಎಂದು ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *