Cricket
ಬುಮ್ರಾಗೆ ಮ್ಯಾಕ್ಸ್ ವೆಲ್ ಬೌಲ್ಡ್ – ಭಾರತಕ್ಕೆ 13 ರನ್ಗಳ ರೋಚಕ ಜಯ

– ಮೊದಲ ಪಂದ್ಯದಲ್ಲೇ ಮಿಂಚಿದ ನಟರಾಜನ್
ಕ್ಯಾನ್ಬೆರಾ: ಇಂದು ನಡೆದ ಆಸ್ಟ್ರೇಲಿಯಾ ಮತ್ತು ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಡಿಯಾ 13 ರನ್ಗಳ ಅಂತರದಲ್ಲಿ ಗೆದ್ದು ಬೀಗಿದೆ. ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗುವುದರಿಂದ ತಪ್ಪಿಸಿಕೊಂಡಿದೆ.
ಇಂದು ಕ್ಯಾನ್ಬೆರಾ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿಯವರ ಅರ್ಧಶಕ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸ್ಫೋಟಕ ಆಟದಿಂದ ನಿಗಧಿತ 50 ಓವರಿನಲ್ಲಿ 302 ರನ್ ಗಳಿತ್ತು. ಈ ಗುರಿಯನ್ನು ಬೆನ್ನಟ್ಟಿ ಆಸೀಸ್ ತಂಡ ಜಸ್ಪ್ರೀತ್ ಬುಮ್ರಾ, ಟಿ ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ನಲುಗಿ 13 ರನ್ಗಳ ಅಂತರದಿಂದ ಸೋತಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯವನ್ನು ಗೆದ್ದು ಕೊನೆಯ ಪಂದ್ಯವನ್ನು ಸೋಲುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ಗೆದ್ದುಕೊಂಡಿತು.
ಟಿ ನಟರಾಜನ್ ಮಿಂಚು
ಇಂದಿನ ಪಂದ್ಯದಲ್ಲಿ ಭಾರತದ ಪರ ಪಾದಾರ್ಪಣೆ ಪಂದ್ಯವಾಡಿದ ಟಿ ನಟರಾಜನ್, ತಮ್ಮ ಕೋಟಾದ 10 ಓವರ್ ಬೌಲ್ ಮಾಡಿ 70 ರನ್ ನೀಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಜೊತೆಗೆ ಶಾರ್ದೂಲ್ ಠಾಕೂರ್ 10 ಓವರ್ ಉತ್ತಮವಾಗಿ ಬೌಲ್ ಮಾಡಿ 51 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಬುಮ್ರಾ ಪ್ರಮುಖ ಹಂತದಲ್ಲಿ ಮ್ಯಾಕ್ಸ್ ವೆಲ್ ಔಟ್ ಮಾಡಿ ಎರಡು ವಿಕೆಟ್ ಕಿತ್ತು ಪಂದ್ಯಕ್ಕೆ ತಿರುವು ನೀಡಿದರು.
ಇಂಡಿಯಾ ನೀಡಿದ್ದ 303 ರನ್ ಗುರಿಯನ್ನು ಬೆನ್ನಟ್ಟಲು ಬಂದ ಆಸೀಸ್ಗೆ ಟಿ ನಟರಾಜನ್ ಶಾಕ್ ನೀಡಿದರು. 7 ರನ್ ಗಳಿಸಿ ಆಡುತ್ತಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ ನಟರಾಜನ್ ಬೌಲಿಂಗ್ ಬೌಲ್ಡ್ ಆದರು. ನಂತರ ಬಂದ ಸ್ಟೀವನ್ ಸ್ಮಿತ್ಅನ್ನು ಶಾರ್ದೂಲ್ ಠಾಕೂರ್ ಬೌಲ್ಡ್ ಮಾಡಿದರು. ನಾಯಕ ಆರೋನ್ ಫಿಂಚ್ ಬಿಟ್ಟರೆ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಯಾವ ಆಟಗಾರನೂ ಸರಿಯಾಗಿ ಬ್ಯಾಟ್ ಬೀಸಲಿಲ್ಲ. ಫಿಂಚ್ ಅವರು 82 ಬಾಲಿಗೆ 75 ರನ್ ಸಿಡಿಸಿ ಜಡೇಜಾ ಅವರಿಗೆ ಔಟ್ ಆದರು.
ಇದಾದ ನಂತರ ಬಂದ ಮೊಯಿಸಸ್ ಹೆನ್ರಿಕ್ಸ್ 22 ರನ್ ಮತ್ತು ಕ್ಯಾಮರೂನ್ ಗ್ರೀನ್ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಜೊತೆ ಸೇರಿಕೊಂಡು ಸ್ಫೋಟಕ ಆಟಕ್ಕೆ ಮುಂದಾದರು. ಆದರೆ 38 ಬಾಲಿಗೆ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ 59 ರನ್ ಸಿಡಿಸಿದ್ದ ಮ್ಯಾಕ್ಸ್ ವೆಲ್ ಅನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಮ್ಯಾಜಿಕ್ ಮಾಡದ ಕಾರಣ ಆಸೀಸ್ ಸೋತಿತು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲೇ ಶಿಖರ್ ಧವನ್ ಅವರನ್ನು ಕಳೆದುಕೊಂಡಿತ್ತು. ಆದರೆ ನಂತರ ಬಂದ ನಾಯಕ ಕೊಹ್ಲಿ 78 ಬಾಲಿಗೆ ಐದು ಬೌಂಡರಿ ಸಮೇತ 63 ರನ್ ಸಿಡಿಸಿದರು. ಕೊಹ್ಲಿ ಔಟ್ ಆದ ನಂತರ ಐಯ್ಯರ್ ಮತ್ತು ರಾಹುಲ್ ಕೂಡ ಔಟ್ ಆದರು. ಆದರೆ ನಂತರ ಒಂದಾದ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಆಟಕ್ಕೆ ಮುಂದಾದರು. ಹಾರ್ದಿಕ್ 76 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡಿರಿ ಸಮೇತ ಭರ್ಜರಿ 92 ರನ್ ಸಿಡಿಸಿದರು. ಪಾಂಡ್ಯಗೆ ಉತ್ತಮ ಸಾಥ್ ನೀಡಿದ ಜಡೇಜಾ 50 ಬಾಲ್ನಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 66 ರನ್ ಸಿಡಿಸಿದರು.
