Thursday, 23rd January 2020

ಕೊಹ್ಲಿ ವಿರಾಟ್ ಆಟ- ಭಾರತಕ್ಕೆ 6 ವಿಕೆಟ್‌ಗಳ ಜಯ

ಹೈದರಾಬಾದ್: ನಾಯಕ ವಿರಾಟ್ ಕೊಹ್ಲಿ, ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ನಿಂದ ಭಾರತ ರಾಜೀವ್ ಗಾಂಧಿ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ 6 ವಿಕೆಟ್‍ಗಳ‌ ಜಯ ಸಾಧಿಸಿದೆ.

ವೆಸ್ಟ್ ಇಂಡೀಸ್ ತಂಡವು ಶಿಮ್ರಾನ್ ಹೆಟ್ಮಾಯೆರ್ 56 ರನ್, ಎವಿನ್ ಲೂಯಿಸ್ 40 ರನ್, ಕಿರಾನ್ ಪೋಲಾರ್ಡ್ 37 ರನ್ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತದ ಕೆ.ಎಲ್.ರಾಹುಲ್ ಹಾಗೂ ನಾಯಕ ವಿರಾಟ ಕೊಹ್ಲಿ ಔಟಾಗದೆ 50 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ನೆರವಿನಿಂದ 94 ರನ್ ಸಿಡಿಸಿ 18.4 ಓವರ್‌ಗಳಲ್ಲಿ 209 ರನ್ ಗಳಿಸಿ ಜಯಗಳಿಸಿತು.

ಇನ್ನಿಂಗ್ಸ್ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಆಘಾತಕ್ಕೆ ಒಳಗಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಾಯ್ದು ರನ್ ಕದಿಯಲು ಆರಂಭಿಸಿದರು. ಈ ಜೋಡಿಯು ಎರಡನೇ ವಿಕೆಟ್ ನಷ್ಟಕ್ಕೆ 130 ರನ್‍ಗಳ ಜೊತೆಯಾಟವಾಡಿತು. ಕನ್ನಡಿಗ ಕೆ.ಎಲ್.ರಾಹುಲ್ 40 ಎಸೆತಗಳಲ್ಲಿ 4 ಸಿಕ್ಸರ್, 5 ಬೌಂಡರಿ ಸೇರಿ 62 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾಕ್ಕಿಳಿದ ಪಂತ್ ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್ ಗೆ ಅಟ್ಟಿದರು.

ಟೀಂ ಇಂಡಿಯಾ ಇನ್ನಿಂಗ್ಸ್ ನ 16ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದು 177 ರನ್ ಗಳಿಸಿತ್ತು. ಆದರೆ ಇನ್ನಿಂಗ್ಸ್ ನ 17ನೇ ಓವರ್‌ನಲ್ಲಿ ರಿಷಭ್ ಪಂತ್ ವಿಕೆಟ್ ಒಪ್ಪಿಸಿದರು. ಪಂತ್ 9 ಎಸೆತಗಳಲ್ಲಿ 2 ಸಿಕ್ಸರ್ ಸೇರಿ 18 ರನ್ ಗಳಿಸಿ ವಿಕೆಟ್ ಕಳೆದುಕೊಂಡು ಪೆವಿಲಿಯನ್‍ಗೆ ತೆರಳಿದರು. ಬಳಿಕ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಸಿಕ್ಸ್ ಮೇಲೆ ಸಿಕ್ಸ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 200ನೇ ಸಿಕ್ಸ್ ಹೊಡೆದರು. ಟೀಂ ಇಂಡಿಯಾ ಆಟಗಾರರಾದ ಸಚಿನ್ ತೆಂಡೂಲ್ಕರ್ 264 ಸಿಕ್ಸರ್, ಸೌರವ್ ಗಂಗೂಲಿ 247 ಸಿಕ್ಸರ್, ವೀರೇಂದ್ರ ಸೆಹ್ವಾಗ್ 243 ಸಿಕ್ಸರ್ ಮತ್ತು ಯುವರಾಜ್ ಸಿಂಗ್ 251 ಸಿಕ್ಸರ್ ದಾಖಲಿಸಿದ್ದಾರೆ. ಅವರ ನಂತರ 200ರ ಗಡಿ ದಾಟಿದ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.

ರೋಹಿತ್ ಕೈತಪ್ಪಿದ ದಾಖಲೆ:
ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 400 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಕೈ ತಪ್ಪಿಸಿಕೊಂಡಿದ್ದಾರೆ. 10 ಎಸೆತಗಳನ್ನು ಎದುರಿಸಿದ ರೋಹಿತ್ ಬೌಂಡರಿ ಸಹಾಯದಿಂದ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ರೋಹಿತ್ ಇನ್ನೊಂದು ಸಿಕ್ಸರ್ ಹೊಡೆದರೆ ಒಟ್ಟು 400 ಸಿಕ್ಸರ್‍ಗಳನ್ನು ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಹಾಗೂ ಭಾರತದ ಮೊದಲ ಆಟಗಾರನಾಗಲಿದ್ದಾರೆ. ರೋಹಿತ್ ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 232 ಮತ್ತು ಟಿ-20ಯಲ್ಲಿ 115 ಸಿಕ್ಸರ್‍ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವಿಂಡೀಸಿನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಶಾಹೀದ್ ಆಫ್ರಿದಿ ಇದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ನ ಮೊದಲ ಓವರ್‌ನಲ್ಲಿ 13 ರನ್ ಸಿಡಿಸಿತ್ತು. ಆದರೆ ಎರಡನೇ ಓವರ್‍ನಲ್ಲಿ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಎವಿನ್ ಲೂಯಿಸ್ ಹಾಗೂ ಬ್ರಾಂಡನ್ ಕಿಂಗ್ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ, ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದರು. ಈ ಜೋಡಿಯು ಎರಡನೇ ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿ, ತಂಡದ ಮೊತ್ತವನ್ನು 53 ರನ್‍ಗೆ ಏರಿಸಿತು. 17 ಎಸೆತಗಳಲ್ಲಿ ಎವಿನ್ ಲೂಯಿಸ್ 4 ಸಿಕ್ಸರ್, 3 ಬೌಂಡರಿ ಸಹಿತ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನಿಂಗ್ಸ್ ನ 11ನೇ ಓವರ್‌ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ, ಬ್ರಾಂಡನ್ ಕಿಂಗ್ ವಿಕೆಟ್ ಕಿತ್ತು, ತಂಡಕ್ಕೆ ಆಸರೆಯಾದರು. ಬ್ರಾಂಡನ್ ಕಿಂಗ್ 23 ಎಸೆತಗಳಲ್ಲಿ ಸಿಕ್ಸ್, 3 ಬೌಂಡರಿ ಸೇರಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ವಿಂಡೀಸ್ ತಂಡದ ನಾಯಕ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು. ಶಿಮ್ರಾನ್ ಹೆಟ್ಮಾಯೆರ್ ಹಾಗೂ ಪೊಲಾರ್ಡ್ ಜೋಡಿಯು 71 ರನ್ ಗಳಿಸಿ, ನಾಲ್ಕನೇ ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 172 ರನ್‍ಗೆ ಏರಿಸಿತ್ತು. ಇನ್ನಿಂಗ್ಸ್ ನ 17ನೇ ಓವರ್ ನಲ್ಲಿ ಈ ಜೋಡಿ ವಿಕೆಟ್ ಒಪ್ಪಿಸಿತು.

ಹೆಟ್ಮಾಯೆರ್ 41 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ಸೇರಿ 56 ರನ್ ಗಳಿಸಿದರೆ, ಪೊಲಾರ್ಡ್ 19 ಎಸೆತಗಳಲ್ಲಿ 4 ಸಿಕ್ಸರ್, ಒಂದು ಬೌಂಡರಿ ಸಹಿತ 37 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ತಂಡಕ್ಕೆ ಆಸರೆಯಾದರು. ಜೇಸನ್ ಹೋಲ್ಡರ್ ಔಟಾಗದೆ 9 ಎಸೆತಗಳಲ್ಲಿ 2 ಸಿಕ್ಸರ್, ಬೌಂಡರಿ ಸಿಡಿಸಿ 24 ರನ್ ಗಳಿಸಿದರು. ಈ ಮೂಲಕ ವಿಂಡೀಸ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್‍ಗಳ ಬೃಹತ್ ಮೊತ್ತ ಪೇರಿಸಿತು. 94 ರನ್ ಸಿಡಿಸಿದ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.

Leave a Reply

Your email address will not be published. Required fields are marked *