Thursday, 12th December 2019

ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 304 ರನ್ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದೆ. ಈ ಮೂಲಕ 3 ಟೆಸ್ಟ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ.

304 ರನ್ ಗಳ ಗೆಲುವು ವಿದೇಶದಲ್ಲಿ ಭಾರೀ ಅಂತರದ ಗೆಲುವು. ಈ ಹಿಂದೆ 1986ರಲ್ಲಿ ಲೀಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 279 ರನ್ ಅಂತರದಲ್ಲಿ ಗೆದ್ದಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಗೆಲ್ಲಲು 550 ರನ್ ಗಳ ಪ್ರಯಾಸಕರ ಟಾರ್ಗೆಟ್ ಪಡೆದುಕೊಂಡಿದ್ದ ಶ್ರೀಲಂಕಾ 76.5 ಓವರ್ ಗಳಲ್ಲಿ 245 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಶ್ರೀಲಂಕಾದ ಆರಂಭಿಕ ಆಟಗಾರ ಕರುಣರತ್ನೆ 97 ರನ್ ಗಳಿಸಿ ಶತಕ ವಂಚಿತರಾದರು. ಇನ್ನುಳಿದಂತೆ ಡಿಕ್ವೆಲ್ಲಾ 67, ಮೆಂಡಿಸ್ 36, ಪಿರೇರಾ 21, ತರಂಗ 10 ರನ್ ಗಳಿಸಿದರು. ಶ್ರೀಲಂಕಾದ ಇಬ್ಬರು ಆಟಗಾರರು ಗಾಯಗೊಂಡಿದ್ದರಿಂದ ಬ್ಯಾಟಿಂಗ್ ಗೆ ಇಳಿಯಲಿಲ್ಲ. ಹೀಗಾಗಿ ಶ್ರೀಲಂಕಾ 245 ರನ್ ಗಳಿಗೆ ಆಲೌಟ್ ಆಯಿತು.

ಭಾರತ ಪರ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್ ಗಳಿಸಿದರೆ ಶಮಿ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಗಳಿಸಿದರು.

ಇದಕ್ಕೂ ಮುನ್ನ ಇಂದು 4ನೇ ದಿನದಾಟ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ತಕ್ಷಣ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಈ ವೇಳೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *