ವಿಶ್ವಕಪ್ ಸೆಮಿಫೈನಲ್: ಕೊಹ್ಲಿ ಬಾಯ್ಸ್‌ಗೆ 240 ರನ್ ಗುರಿ

ಮ್ಯಾಂಚೆಸ್ಟರ್: ಮಳೆಯ ಪರಿಣಾಮ 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ನಿಗದಿತ ಸಮಯಕ್ಕೆ ಆರಂಭವಾಗಿದ್ದು, ನಿನ್ನೆ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿದ್ದ ನ್ಯೂಜಿಲೆಂಡ್ ಇಂದು 3 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಭಾರತಕ್ಕೆ 240 ರನ್ ಗುರಿ ನೀಡಿತು.

67 ರನ್ ಗಳಿಸಿ ಬ್ಯಾಟಿಂಗ್ ಕ್ರೀಸ್‍ನಲ್ಲಿದ್ದ ಅನುಭವಿ ಆಟಗಾರ ರಾಸ್ ಟೇಲರ್ 74 ರನ್ ಗಳಿಸಿ ರನೌಟ್ ಆಗಿ ನಿರ್ಗಮಿಸಿದರು. ಲಾಥಮ್ 11 ರನ್, ಹೆನ್ರಿ 1 ರನ್ ಗಳಿಸಿ ಔಟಾದರು. ಸ್ಯಾಂಟನರ್ ಹಾಗೂ ಬೋಲ್ಟ್ 3 ರನ್ ಗಳಿಸಿ ಅಜೇಯರಾಗಿ ಉಳಿದರು. ಪರಿಣಾಮ ಭಾರತ 240 ರನ್ ಗುರಿ ಪಡೆಯಿತು. ಪಂದ್ಯದಲ್ಲಿ ಬೀಗಿ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬುಮ್ರಾ, ಪಾಂಡ್ಯ, ಜಡೇಜಾ, ಚಹಲ್ ತಲಾ 1 ವಿಕೆಟ್ ಪಡೆದರು.

ರಿವರ್ಸ್ ಡೇ ಹಿನ್ನೆಲೆಯಲ್ಲಿ ಮುಂದುವರಿಯತ್ತಿರುವ ಪಂದ್ಯದಲ್ಲಿ ಇದಕ್ಕೂ ಮುನ್ನ ದಿನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ ತಂಡ ನಾಯಕ ವಿಲಿಯಮ್ಸನ್ 95 ಎಸೆತಗಳಲ್ಲಿ 67 ರನ್ ಗಳ ನೆರವಿನಿಂದ 211 ರನ್ ಗಳಿಸಿತ್ತು. ಈ ನಡುವೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಪಂದ್ಯವನ್ನು ಮುಂದೂಡಲಾಗಿತ್ತು. ಒಂದೊಮ್ಮೆ ಪಂದ್ಯ ಇಂದೂ ಮಳೆಗೆ ಆಹುತಿಯಾದರೆ ಟೀಂ ಇಂಡಿಯಾ ರನ್ ರೇಟ್, ಅಂಕಗಳ ಅನ್ವಯ ನೇರ ಫೈನಲ್‍ಗೆ ತಲುಪಲಿದೆ.

Leave a Reply

Your email address will not be published. Required fields are marked *