Wednesday, 11th December 2019

10 ರನ್ ಅಂತರದಲ್ಲಿ 5 ವಿಕೆಟ್ ಪತನ- 150 ರನ್‍ಗಳಿಗೆ ಬಾಂಗ್ಲಾ ಆಲೌಟ್

– ಉತ್ತಮ ಸ್ಥಿತಿಯಲ್ಲಿ ಭಾರತ

ಇಂದೋರ್: ಟೀಂ ಇಂಡಿಯಾ ವೇಗಿಗಳು ಬಾಂಗ್ಲಾದೇಶ ತಂಡವನ್ನು ಕೇವಲ 150 ರನ್‍ಗಳಿಗೆ ಆಲೌಟ್ ಮಾಡಿದ್ದು ಭಾರತ ಉತ್ತಮ ಸ್ಥಿತಿಯಲ್ಲಿದೆ.

ಇಂದೋರ್‌ನಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ 58.3 ಓವರ್‍ಗಳಲ್ಲಿ 150 ರನ್‍ಗಳಿಗೆ ಆಲೌಟ್ ಆಗಿದೆ. ತಂಡದ ಮುಷ್ಫಿಕರ್ ರಹೀಮ್ 43 ರನ್, ಮೊಮಿನುಲ್ ಹಕ್ 37 ರನ್ ಗಳಿಸಿ ತಂಡಕ್ಕೆ ಆಸರೆಯಾದರು. 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ 10 ರನ್ ಗಳಿಸುವಷ್ಟರಲ್ಲಿ ಉಳಿದ 5 ವಿಕೆಟ್ ಕಳೆದುಕೊಂಡಿತು. 6 ಬ್ಯಾಟ್ಸ್‍ಮನ್‍ಗಳು ಎರಡಂಕಿ ರನ್ ಗಡಿ ದಾಟದ ಪರಿಣಾಮ ಬಾಂಗ್ಲಾ ಕುಸಿತ ಕಂಡಿತು.

ಮಿಂಚಿದ ಶಮಿ:
2019ರ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಮೊಹಮ್ಮದ್ ಶಮಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶಮಿ 3 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದು ಮುಂಚಿದ್ದಾರೆ.

ಮುರಳೀಧರನ್ ಸರಿಗಟ್ಟಿದ ಅಶ್ವಿನ್:
ಟೀಂ ಇಂಡಿಯಾ ಸ್ಪಿನ್ನರ್ ಆರ್.ಅಶ್ವಿನ್ ತವರು ಮೈದಾನದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಪಡೆದ ಅಶ್ವಿನ್, ಅತಿ ವೇಗದಲ್ಲಿ 250 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ಸರಿಗಟ್ಟಿದ್ದಾರೆ. ಇಬ್ಬರೂ ಸ್ಪಿನ್ನರ್‌ಗಳು 42 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 6 ರನ್‍ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಮಯಾಂಕ್ ಅಗರ್‍ವಾಲ್ 37 ರನ್ ಹಾಗೂ ಚೇತೇಶ್ವರ ಪೂಜಾರ 43 ರನ್ ಸಹಾಯದಿಂದ ಟೀಂ ಇಂಡಿಯಾ 86 ರನ್ ಗಳಿಸಿದೆ.

Leave a Reply

Your email address will not be published. Required fields are marked *