Connect with us

Latest

2022ರ ಆಗಸ್ಟ್ ವೇಳೆಗೆ ಜಮ್ಮುವಿನಲ್ಲಿ ಪೂರ್ಣಗೊಳ್ಳಲಿದೆ ವಿಶ್ವದ ಎತ್ತರದ ರೈಲ್ವೆ ಸೇತುವೆ

Published

on

– ಐಫೆಲ್ ಟವರ್‌ಗಿಂತ ಎತ್ತರದ ಬ್ರಿಡ್ಜ್

ನವದೆಹಲಿ: ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ 2022ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಲಭಿಸಿದೆ.

ಐಫೆಲ್ ಟವರ್ ಗಿಂತ ಎತ್ತರವಾಗಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡರೇ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಕೌರಿ ಗ್ರಾಮದ ಕತ್ರಾ-ಬನಿಹಾಲ್ ರೈಲ್ವೆ ಮಾರ್ಗದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಈ ಸೇತುವೆ ಚೇನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿದ್ದು, 1.3 ಕಿ.ಮೀ ಉದ್ದವಿದೆ. ಈ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣದ 5-6 ಗಂಟೆ ಸಮಯವನ್ನು ಕಡಿಮೆ ಮಾಡಲಿದೆ.

ಈ ಕುರಿತು ಮಾತನಾಡಿರುವ ಡೆಪ್ಯುಟಿ ಚೀಫ್ ಮುಖ್ಯ ಎಂಜಿನಿಯರ್, 2022ರ ವೇಳೆಗೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಗಿದೆ. ಸೇತುವೆ ನಿರ್ಮಾಣದ ಕಾರ್ಯ ಹಲವು ಸವಾಲುಗಳಿಂದ ಕೂಡಿದೆ. ಆದರೆ ಸೇತುವೆ ನಿರ್ಮಾಣ ಕಾರ್ಯ ವೈಷ್ಣೋ ದೇವಿ ಪುಣ್ಯ ಕ್ಷೇತ್ರಕ್ಕೆ ಪ್ರಸಿದ್ಧಿಯಾಗಿರುವ ಜಿಯಾಸಿ ರಿಯಾಸಿ ಜಿಲ್ಲೆಯ ಪ್ರವಾಸೋಧ್ಯಮದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ. ಸೇತುವೆ ಮೇಲೆ ಹೆಲಿಪ್ಯಾಡ್ ನಿರ್ಮಾಣವಾಗುವ ಕಾರಣ ಜನರು ತಮ್ಮ ಚಾಫರ್ ಮೂಲಕ ಇಲ್ಲಿಗೆ ಆಗಮಿಸಬಹುದು ಎಂದಿದ್ದಾರೆ.

ಕೊಂಕಣ ರೈಲ್ವೆ ಈ ಯೋಜನೆಯ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದು, 2004ರಲ್ಲಿ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿತ್ತು. ಉಧಮಾಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಯೋಜನೆಯ ಒಂದು ಭಾಗವಾಗಿದೆ. ಈ ಮಾರ್ಗದಲ್ಲಿ ಉಧಮಾಪುರ-ಕಾತ್ರ (25 ಕಿಮೀ) ಸೆಕ್ಷನ್, ಬನಿಹಾಳ್-ಕ್ವಾಜಿಗುಂಡ್ (18 ಕಿಮೀ) ಸೆಕ್ಷನ್ ಹಾಗೂ ಕ್ವಾಜಿಗುಂಡ್-ಬಾರಾಮುಲ್ಲಾ (118 ಕಿಮೀ) ವಿಭಾಗವನ್ನು ಈಗಾಗಲೇ ನಿರ್ಮಿಸಲಾಗಿದೆ.

ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ 266 ಕಿಮೀ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 120 ವರ್ಷಗಳ ಕಾಲಮಿತಿಯನ್ನು ಸೇತುವೆ ಹೊಂದಿದೆ.

ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *