Wednesday, 26th June 2019

Recent News

10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

ದುಬೈ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-4 ರ ಅಂತದ ಮೂಲಕ ಮುಗ್ಗರಿಸಿದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದೆ.

ಸರಣಿಯ ಅಂತಿಮ ಓವೆಲ್ ಟೆಸ್ಟ್ ಹೋರಾಟದಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹೋರಾಟದ ಬಳಿಕವೂ ಟೀಂ ಇಂಡಿಯಾ ಪಂದ್ಯದಲ್ಲಿ ಸೋಲುಂಡಿತು. ಆದರೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 115 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆದರೆ ಸರಣಿ ಸೋಲಿನ ಹಿನ್ನೆಲೆಯಲ್ಲಿ ಬರೋಬ್ಬರಿ 10 ಅಂಕಗಳನ್ನು ಕಳೆದುಕೊಂಡಿದೆ.

ಇತ್ತ ಸರಣಿ ಗೆದ್ದ ಇಂಗ್ಲೆಂಡ್ 105 ಅಂಕಗಳನ್ನು ಪಡೆದು 4ನೇ ಸ್ಥಾನಕ್ಕೆ ಏರಿದೆ. 4ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 102 ಅಂಕ ಗಳಿಸಿದ್ದು 5ನೇ ಸ್ಥಾನಕ್ಕೆ ಕುಸಿದಿದೆ. ಟೀಂ ಇಂಡಿಯಾ ವಿರುದ್ಧದ ಟೂರ್ನಿಗೂ ಮುನ್ನ ಇಂಗ್ಲೆಂಡ್ 97 ಅಂಕಗಳನ್ನು ಹೊಂದಿತ್ತು.

ಇಂಗ್ಲೆಂಡ್ ಪರ ವಿದಾಯ ಪಂದ್ಯವಾಡಿದ ಕುಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ವೃತ್ತಿ ಜೀವನದಲ್ಲಿ 33ನೇ ಶತಕ ಸಿಡಿದ ಕುಕ್‍ಗೆ ಇಂಗ್ಲೆಂಡ್ ತಂಡದ ಆಟಗಾರಾರರು 33 ಬೀಯರ್ ಬಟಲ್ ಗಿಫ್ಟ್ ನೀಡಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ತಲಾ 106 ಅಂಕಗಳಿಂದ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದೆ. ಅಕ್ಟೋಬರ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದ್ದು, ಅಕ್ಟೋಬರ್ 4ರಿಂದ ರಾಜಕೋಟ್ ನಲ್ಲಿ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Leave a Reply

Your email address will not be published. Required fields are marked *