Connect with us

Latest

ಮೋದಿಗೆ ನರಕ ತೋರಿಸುತ್ತೇನೆ ಎಂದ ಪಾಕ್ ಗಾಯಕಿಗೆ 2 ವರ್ಷ ಜೈಲು ಶಿಕ್ಷೆ?

Published

on

ಇಸ್ಲಾಮಾಬಾದ್: ಕಾಶ್ಮೀರ ಬೇಕು ಎನ್ನುತ್ತಿರುವ ಮೋದಿಗೆ ನರಕ ತೋರಿಸುತ್ತೇನೆ ಎಂದು ಹೆಬ್ಬಾವಿನ ಜೊತೆ ವಿಡಿಯೋ ಮಾಡಿದ್ದ ಪಾಕಿಸ್ತಾನದ ಪಾಪ್ ಸಿಂಗರ್‍ಗೆ ಈಗ ಎರಡು ವರ್ಷ ಜೈಲಿಗೆ ಹೋಗುವ ಸ್ಥಿತಿ ಬಂದಿದೆ.

ಲಹೋರ್ ನಲ್ಲಿರುವ ತನ್ನ ಬ್ಯೂಟಿ ಪಾರ್ಲರ್ ನಲ್ಲಿ ಹೆಬ್ಬಾವು ಮತ್ತು ಮೊಸಳೆ ಜೊತೆ ವಿಡಿಯೋ ಮಾಡಿ ಮೋದಿಗೆ ನಿಂದಿಸಿದ್ದ ಪಾಕ್ ಸಿಂಗರ್ ಮತ್ತು ಟಿವಿ ನಿರೂಪಕಿ ರಬಿ ಪಿರ್ಜಾದಾ ವಿರುದ್ಧ ದೂರು ದಾಖಲಾಗಿದೆ.

ಹೆಬ್ಬಾವು ಮತ್ತು ಮೊಸಳೆಯನ್ನು ಹಿಡಿದು ವಿಡಿಯೋ ಮಾಡಿದ್ದ ರಬಿ, ನಾನು ಕಾಶ್ಮೀರಿ ಮಹಿಳೆ, ಭಾರತಕ್ಕಾಗಿ ನಾವು ಹಾವುಗಳೊಂದಿಗೆ ಸಿದ್ಧವಾಗಿದ್ದೇವೆ. ಈ ಉಡುಗೊರೆಗಳು ನಿಜಕ್ಕೂ ಮೋದಿಯವರಿಗೆ. ನೀವು ಕಾಶ್ಮೀರಿಗಳಿಗೆ ತೊಂದರೆ ನೀಡುತ್ತಿದ್ದೀರಿ. ಆದ್ದರಿಂದ ನಾನು ನಿಮಗಾಗಿ ಈ ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿದ್ದೇನೆ. ನೀವು ನರಕದಲ್ಲಿ ಸಾಯಲು ಸಿದ್ಧರಾಗಿ. ನನ್ನ ಸ್ನೇಹಿತರು ನರಕದಲ್ಲಿ ನಿಮ್ಮ ಜೊತೆ ಹಬ್ಬವನ್ನು ಮಾಡುತ್ತಾರೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಳು.

ಈ ವಿಡಿಯೋ ಮಾಡಿ ಸೆಪ್ಟಂಬರ್ 2 ರಂದು ತನ್ನ ಅಧಿಕೃತ ಟ್ವಿಟ್ಟರ್, ಯೂಟ್ಯೂಬ್ ಮತ್ತು ಇನ್‍ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಿದ್ದಳು. ಈ ವಿಡಿಯೋವನ್ನು ಭಾರತ ಮತ್ತು ಪಾಕಿಸ್ತಾನದ ಮಾಧ್ಯಮಗಳು ಪ್ರಸಾರ ಮಾಡಿತ್ತು. ಇದರ ಜೊತೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಸಖತ್ ವೈರಲ್ ಆಗಿತ್ತು.

ವಿಡಿಯೋ ಅಪ್ಲೋಡ್ ಮಾಡಿ ಒಂದು ವಾರದ ನಂತರ ಎಚ್ಚೆತ್ತ ಪಾಕಿಸ್ತಾನ ಪಂಜಾಬ್ ಸರ್ಕಾರ ವ್ಯಜೀವಿ ಸಂರಕ್ಷಣಾ ಸಂಸ್ಥೆ ಮನೆಯಲ್ಲಿ ನಾಯಿಗಳ ರೀತಿಯಲ್ಲಿ ವಿಷಕಾರಕ ಮತ್ತು ವಿಲಕ್ಷಣ ಪ್ರಾಣಿಗಳನ್ನು ಸಾಕುವುದು ಅಥವಾ ಇಟ್ಟುಕೊಳ್ಳುವುದು ತಪ್ಪು ಎಂದು ರಬಿ ಪಿರ್ಜಾದಾ ಮೇಲೆ ದೂರು ದಾಖಲಿಸಿಕೊಂಡು ವಿಚಾರಣೆ ಪ್ರಾರಂಭಿಸಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಸೂಹೈಲ್ ಅಶ್ರಫ್, ಪಾಕಿಸ್ತಾನದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಈ ರೀತಿಯ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದನ್ನು ನಿಷೇಧಿಸಲಾಗಿದೆ. ಆಕೆಯು ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಯಾವುದೇ ರೀತಿಯ ಪರವಾನಗಿ ಪಡೆದಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ದರಿಂದ ರಬಿ ಪಿರ್ಜಾದಗೆ ಎರಡು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.