Recent News

ಏಟಿಗೆ ತಿರುಗೇಟು- ಅಮೆರಿಕದ 28 ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದ ಭಾರತ

ನವದೆಹಲಿ: ಸ್ಟೀಲ್ ಹಾಗೂ ಅಲ್ಯೂಮಿನಿಯಂನಂತಹ ಭಾರತೀಯ ಉತ್ಪನ್ನಗಳ ಮೇಲೆ ವಾಷಿಂಗ್ಟನ್ ಕಸ್ಟಮ್ ತೆರಿಗೆ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಯುಎಸ್‍ನ 28 ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ ಮಾಡಿ ಏಟಿಗೆ ತಿರುಗೇಟು ನೀಡಿದೆ.

ಯುಎಸ್‍ನ ಉತ್ಪನ್ನಗಳಾದ ಬಾದಾಮಿ, ಬೆಳೆಕಾಳುಗಳು ಹಾಗೂ ವಾಲ್ನಟ್ ಸೇರಿದಂತೆ 28 ಉತ್ಪನ್ನಗಳ ಮೇಲೆ ಭಾರತ ಕಸ್ಟಮ್ ತೆರಿಗೆ ಹೆಚ್ಚಳ ಮಾಡಿರುವುದಾಗಿ ಶನಿವಾರದಂದು ಫೋಷಿಸಿದ್ದು, ಭಾನುವಾರದಿಂದ ಈ ತೆರಿಗೆ ಕ್ರಮ ಜಾರಿಗೆ ಬರಲಿದೆ ಎಂದು ಅಧಿಕೃತ ಅಧಿಸೂಚನೆ ನೀಡಿದೆ.

ಈ ಮೊದಲು ಈ ಪಟ್ಟಿಯಲ್ಲಿ 29 ಸರಕುಗಳು ಮಾತ್ರ ಇದ್ದವು ಆದರೆ ಭಾರತವು ಸಿಗಡಿಗಳನ್ನು ಈ ಪಟ್ಟಿಯಿಂದ ತೆಗೆದು ಹಾಕಿದೆ. ಈ ಕ್ರಮದಿಂದಾಗಿ 28 ವಸ್ತುಗಳನ್ನು ರಫ್ತು ಮಾಡುವ ಅಮೆರಿಕದ ರಫ್ತುದಾರರಿಗೆ ತೊಂದರೆಯಾಗಲಿದ್ದು, ಅವರು ಹೆಚ್ಚಿನ ಸುಂಕವನ್ನು ಪಾವತಿಸಬೇಕಾಗುತ್ತದೆ ಅಲ್ಲದೆ ಆ ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತವೆ. ಇಂತಹ ಆಮದುಗಳಿಂದ ಭಾರತಕ್ಕೆ ಸುಮಾರು 217 ಮಿಲಿಯನ್ ಡಾಲರ್ ಹೆಚ್ಚುವರಿ ಆದಾಯ ಸಿಗಲಿದೆ ಎನ್ನಲಾಗಿದೆ.

ಜೂನ್ 30, 2017 ರ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಶನಿವಾರದ ಅಧಿಸೂಚನೆಯಲ್ಲಿ ಯುಎಸ್‍ಎಯಿಂದ ರಫ್ತು ಮಾಡಿದ 28 ನಿರ್ದಿಷ್ಟ ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಹೇರಲಿದೆ ಎನ್ನಲಾಗಿದೆ. ಆದರೆ ಅಸ್ತಿತ್ವದಲ್ಲಿರುವ ಎಂಎಫ್‍ಎನ್ ದರ ಉಳಿದೆಲ್ಲಾ ದೇಶಗಳಲ್ಲಿ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆಯೋ ಹಾಗೆಯೇ ಇರಲಿದೆ.

ಅಮೆರಿಕ ಕಳೆದ ವರ್ಷ ಮಾರ್ಚ್ ನಲ್ಲಿ ಉಕ್ಕಿನ ಮೇಲೆ ಶೇ 25 ರಷ್ಟು ತೆರಿಗೆ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ಶೇ 10 ರಷ್ಟು ಆಮದು ತೆರಿಗೆ ವಿಧಿಸಿತ್ತು. ಈ ಮೊದಲು ಭಾರತ ರಫ್ತು ಮಾಡುವ ಈ ಸರಕುಗಳ ಮೇಲೆ ಯುಎಸ್ ಯಾವುದೇ ತೆರಿಗೆ ವಿಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಧಾರಕ್ಕೆ ಭಾರತ ಪ್ರತೀಕಾರವಾಗಿ ಯುಎಸ್ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ವಿಧಿಸಲು ಜೂನ್ 21, 2018 ರಂದು ನಿರ್ಧರಿಸಿತು.

ಭಾರತವು ಯುಎಸ್‍ಗೆ ಈ ವಸ್ತುಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿರುವುದರಿಂದ, ಈ ಕ್ರಮವು ದೇಶೀಯ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಸುಮಾರು 240 ಮಿಲಿಯನ್ ಡಾಲರ್ ಗಳಷ್ಟು ಆದಾಯವನ್ನು ಹೊಂದಿದೆ.

ಅಲ್ಲದೆ ಜೂನ್ 5 ರಿಂದ ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆ (ಜಿಎಸ್‌ಪಿ) ಯೋಜನೆ ಅಡಿಯಲ್ಲಿ ಭಾರತೀಯ ರಫ್ತುದಾರರಿಗೆ ರಫ್ತು ಪ್ರೋತ್ಸಾಹವನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರ ಜಾರಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಭಾರತ ಅಮೆರಿಕಾದ ಹಲವಾರು ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಸೂಚಿಸಿದೆ. ಇದರಿಂದ ಭಾರತದಿಂದ 5.5 ಮಿಲಿಯನ್ ಡಾಲರ್ ಹೆಚ್ಚಿನ ಸುಂಕದ ಹಣ ಅಮೇರಿಕ ಖಜಾನೆ ಸೇರುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *